ಬಾಲಿವುಡ್ ನ ಖ್ಯಾತ ನಿರ್ದೇಶಕ ಸತೀಶ್ ಕೌಶಿಕ್ ಹೃದಯಾಘಾತದಿಂದ ನಿಧನ

ಮುಂಬಯಿ ಮಾ.9 :  ಬಾಲಿವುಡ್ ನ ಹಿರಿಯ ನಟ, ನಿರ್ದೇಶಕ  ಸತೀಶ್ ಕೌಶಿಕ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

66 ವರ್ಷದ ಸತೀಶ್ ಕೌಶಿಕ್ ಅವರು ಗುರುಗ್ರಾಮ್‌ ನಲ್ಲಿ ಆಪ್ತರೊಬ್ಬರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಅವರ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

ಬಾಲಿವುಡ್ ನಲ್ಲಿ ಅನೇಕ ಹಾಸ್ಯ ಪಾತ್ರಗಳಲ್ಲಿ ಮಿಂಚಿ, ನಿರ್ದೇಶಕ, ನಿರ್ಮಾಪಕರಾಗಿಯೂ ಖ್ಯಾತಿಗಳಿಸಿದ್ದ ಸತೀಶ್ ಕೌಶಿಕ್ ಅವರು ಏಪ್ರಿಲ್‌, 13, 1956 ರಲ್ಲಿ ಹರ್ಯಾಣದಲ್ಲಿ ಜನಿಸಿದ್ದರು. ಸತೀಶ್‌ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಮತ್ತು ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಹಳೆಯ ವಿದ್ಯಾರ್ಥಿ ಮತ್ತು ರಂಗಭೂಮಿಯ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ʼಮಿಸ್ಟರ್‌ ಇಂಡಿಯಾʼ, ʼದೀವಾನಾ ಮಸ್ತಾನಾʼ, ʼಬ್ರೀಕ್ ಲೇನ್‌ʼ‌,ʼಸಾಜನ್ ಚಲೇ ಸಸುರಲ್ʼ ಮುಂತಾದ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ಅವರು ಜನಪ್ರಿಯ ಸಿನಿಮಾಗಳಾದ ʼರೂಪ್ ಕಿ ರಾಣಿ ಚೋರೋನ್ ಕಾ ರಾಜಾʼ, ʼಪ್ರೇಮ್ʼ, ʼಹಮ್ ಆಪ್ಕೆ ದಿಲ್ ಮೇ ರೆಹತೇ ಹೈʼ ,ʼತೇರೆ ನಾಮ್ʼ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!