ಲೋಕಾಯುಕ್ತ ದಾಳಿ- ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ 6 ಕೋಟಿ ರೂ. ನಗದು ಪತ್ತೆ
ಬೆಂಗಳೂರು, ಮಾ.3: ಟೆಂಡರ್ ಕೊಡಿಸುವ ವಿಚಾರಕ್ಕೆ ಸಂಬಂಧಿಸಿ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪುತ್ರ ಪ್ರಶಾಂತ್ ಮಾಡಾಳ್ ಮನೆಯಿಂದ ಲೋಕಾಯುಕ್ತ ಪೊಲೀಸರು ಆರು ಕೋಟಿ ರೂ. ನಗದನ್ನು ನಿನ್ನೆ ತಡರಾತ್ರಿ ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆ.ಎಸ್.ಡಿ.ಎಲ್.) ಟೆಂಡರ್ ಗೆ ಸಂಬಂಧಿಸಿದ ಲಂಚ ಪಡೆಯುತ್ತಿದ್ದ ವೇಳೆ ಪ್ರಶಾಂತ್ ಮಾಡಾಳ್ ಅವರನ್ನು ನಿನ್ನೆ ಸಂಜೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಬಳಿಕದ ಕಾರ್ಯಾಚರಣೆಯಲ್ಲಿ ಅವರ ಖಾಸಗಿ ಕಚೇರಿಯಿಂದ 1.62 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಲೋಕಾಯುಕ್ತ ಪೊಲೀಸರು ನಿನ್ನೆ ತಡರಾತ್ರಿ ಡಾಲರ್ಸ್ ಕಾಲನಿಯಲ್ಲಿರುವ ಪ್ರಶಾಂತ್ ಮಾಡಾಳ್ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸಿದಾಗ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಆರು ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಪ್ರಶಾಂತ್ ಮಾಡಾಳ್ ಅವರ ತಂದೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಮಾಡಾಳ್ ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ ಡಿಎಲ್)ಯ ಅಧ್ಯಕ್ಷರಾಗಿದ್ದಾರೆ.