ಇವರ ಮನೆ ಹಾಳಾಗ ಐದು ವರ್ಷದಲ್ಲಿ ಒಂದೂ ಮನೆಯನ್ನು ಕೊಟ್ಟಿಲ್ಲ-ಸಿದ್ದರಾಮಯ್ಯ ಕಿಡಿ
ಚನ್ನಮ್ಮನ ಕಿತ್ತೂರು ಮಾ.2 : ಇವರ ಮನೆ ಹಾಳಾಗ ಐದು ವರ್ಷದಲ್ಲಿ ಒಂದೂ ಮನೆಯನ್ನು ಕೊಟ್ಟಿಲ್ಲ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ.
ತಾಲ್ಲೂಕಿನ ಹೊಸ ಕಾದರವಳ್ಳಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ್ದ ‘ಪ್ರಜಾಧ್ವನಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಡವರಿಗೆ ಐದು ಲಕ್ಷ ಮನೆ ಕಟ್ಟಿಸಿದ್ದ. ಇವರ (ಬಿಜೆಪಿ) ಮನೆ ಹಾಳಾಗ ಐದು ವರ್ಷದಲ್ಲಿ ಒಂದೂ ಮನೆಯನ್ನು ಕೊಟ್ಟಿಲ್ಲ”. ‘ವಸತಿ ಸಚಿವ ವಿ. ಸೋಮಣ್ಣ ಅವರನ್ನು ವಿಧಾನಸಭೆಯಲ್ಲಿ ಈ ಬಗ್ಗೆ ಆದೇಶವಿದ್ದರೆ ಕೊಡಿ ಎಂದು ಕೇಳಿದೆ. ನಾಲ್ಕು ವರ್ಷದಲ್ಲಿ ಒಂದೂ ಆದೇಶ ತೋರಿಸಲಿಲ್ಲ’ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ವೇದಿಕೆ ಏರುತ್ತಿದ್ದಂತೆ ಇನಾಮದಾರ ಮತ್ತು ಬಾಬಾಸಾಹೇಬ ಬೆಂಬಲಿಗರ ಮಧ್ಯೆ ‘ಕಟೌಟ್ ಕದನ’ ನಡೆಯಿತು. ನಾಯಕರ ಆಳೆತ್ತರದ ಕಟೌಟ್ ಹಿಡಿದು ವೇದಿಕೆ ಬಳಿ ಬಂದು, ಇಬ್ಬರ ಪರ ಘೋಷಣೆ ಕೂಗಿದರು. ಕೆಲವರಂತೂ ಕುರ್ಚಿಗಳಿಗೆ ಹಾಕಲಾಗಿದ್ದ ಬಟ್ಟೆ ತೆಗೆದು ತೂರಾಡಿದರು.
ಇನಾಮದಾರ ಅವರು ಮಾತನಾಡುವ ಸಂದರ್ಭದಲ್ಲಿಯೂ ಬಾಬಾಸಾಹೇಬ ಪರವಾಗಿ ನಿರಂತರ ಘೋಷಣೆ ಮೊಳಗಿದವು, ಸಹನೆ ಕಳೆದುಕೊಂಡ ಇನಾಮದಾರ ಅವರು, ‘ಈ ರೀತಿ ಮಾಡುವುದು ಸರಿಯಲ್ಲ. ಟಿಕೆಟ್ ಕೊಡುವ ಮನಸ್ಸಿದ್ದರೂ ಈ ವರ್ತನೆಯಿಂದ ಮುಖಂಡರು ಕೊಡದಂತೆ ಮಾಡುತ್ತೀರಿ’ ಎಂದು ಘೋಷಣೆ ಕೂಗುವವರನ್ನು ತರಾಟೆಗೆ ತೆಗೆದುಕೊಂಡರು.
ಪಕ್ಷದ ಮುಖಂಡರಾದ ಪ್ರಕಾಶ ರಾಠೋಡ, ವಿನಯ ನಾವಲಗಟ್ಟಿ, ಜಿಲ್ಲೆ, ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಇದ್ದರು.