ರಾಜಕೀಯ ನಿವೃತ್ತಿ ಘೋಷಣೆ ವದಂತಿ: ತನ್ವೀರ್ ಸೇಠ್ ನಿವಾಸದ ಎದುರು ಪ್ರತಿಭಟನೆ- ಆತ್ಮಹತ್ಯೆಗೆ ಯತ್ನಿಸಿದ ಬೆಂಬಲಿಗ
ಮೈಸೂರು ಫೆ.28 : ಮಾಜಿ ಸಚಿವ ತನ್ವೀರ್ ಸೇಠ್ ಅವರು ರಾಜಕೀಯ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆಂಬ ವದಂತಿ ಬೆನ್ನಲ್ಲೇ ಅವರ ನಿವಾಸದ ಎದುರು ಬೆಂಬಲಿಗರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ನರಸಿಂಹರಾಜ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ರಾಜಕೀಯ ನಿವೃತ್ತಿ ಬಗ್ಗೆ ಪತ್ರ ಬರೆದಿದ್ದಾರೆಂಬ ವಿಷಯ ತಿಳಿಯುತ್ತಿದ್ದಂತೆ ತನ್ವೀರ್ ಸೇಠ್ ನಿವಾಸದ ಎದುರು ಜಮಾಯಿಸಿದ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಬೆಂಬಲಿಗನೋರ್ವ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ನಡೆದಿದೆ.
ಮಾಜಿ ಸಚಿವ ತನ್ವೀರ್ ಸೇಠ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಡಿಸೆಂಬರ್ ನಲ್ಲಿ ಪತ್ರ ಬರೆದು, ಅನಾರೋಗ್ಯದ ಕಾರಣ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದರೆನ್ನಲಾಗಿದೆ.