7 ನೇ ವೇತನ ಆಯೋಗ ಜಾರಿಗೆ ಸಿದ್ದರಿದ್ದೇವೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ ಫೆ.28 : ರಾಜ್ಯದಲ್ಲಿ 7 ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರಕಾರಿ ನೌಕರರು ಮಾ.1 ರಿಂದ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಬೆನ್ನಲ್ಲೇ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, 7 ನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಹಣ ಮೀಸಲಿರಿಸಿದ್ದೇವೆ. ಮಧ್ಯಂತರ ವರದಿ ಸಿದ್ದಪಡಿಸುತ್ತಿದ್ದೇವೆ. ವರದಿ ಬಂದ ಕೂಡಲೇ ಜಾರಿ ಮಾಡಲಾಗುವುದು. 2023-24 ನೇ ಸಾಲಿನಲ್ಲೇ ಆಯೋಗ ಜಾರಿಗೆ ತರಲಾಗುವುದು. ಈ ಕುರಿತು ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ನೌಕರರ ಬೇಡಿಕೆಗಳನ್ನು ಈಡೇರಿಸಲು ಸಿದ್ದರಿದ್ದೇವೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು  ಚುನಾವಣೆ ಏಜೆಂಟ್ ಎಂದಿರುವ ವಿಪಕ್ಷ ನಾಯಕ ಸಿದ್ಧ ರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ ಸೇರಿದಂತೆ ಅನೇಕ ನಾಯಕರು ರಾಜ್ಯಕ್ಕೆ ಬರುತ್ತಿರುವುದರಿಂದ ಕಾಂಗ್ರೆಸ್ ನಾಯಕರು ಹತಾಷೆಗೊಂಡಿದ್ದಾರೆ. ಭ್ರಮನಿರಸಗೊಂಡಿರುವ ಸಿದ್ದರಾಯಮಯ್ಯ ಅವರು ಬೇಕಾ ಬಿಟ್ಟಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ, ಗೃಹಸಚಿವರಿಗೆ ಚುನಾವಣೆ ಏಜೆಂಟ್ ಎಂದು ಹಗುರವಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿಯಾದವರಿಗೆ ಶೋಭೆಯಲ್ಲ. ರಾಜ್ಯಕ್ಕೆ ರಾಹುಲ್ ಗಾಂಧಿ ಹಾಗೂ ಇತರರು ಬಂದು ಹೋಗುತ್ತಿದ್ದಾರೆ. ಹಾಗಾದರೆ ಅವರು ಚುನಾವಾಣ ಏಜೆಂಟರಾ ಎಂದು ಪ್ರಶ್ನಿಸಿದರು. 

ಬನವಾಸಿಯಲ್ಲಿ ಸಿಎಂ ಗೋ ಬ್ಯಾಕ್ ವಿಚಾರಕ್ಕೆ ಮಾತನಾಡಿದ ಅವರು, ನಾಲ್ಕು ಮಂದಿ ಗೋ ಬ್ಯಾಕ್ ಅಂದ್ರೆ ತಲೆಕೆಡಿಸಿಕೊಳ್ಳಲ್ಲ. ಗೋ ಬ್ಯಾಕ್ ಅಭಿಯಾನ ಮಾಮೂಲಿಯಾಗಿದೆ. ಹಾಗೂ ಈಗಾಗಲೇ ಪಕ್ಷ ಬಲವರ್ಧನೆ ನಡೆಯುತ್ತಿದೆ. ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಮತ್ತೆ ಬರುತ್ತಾರೆ ಎಂದರು.

ಇದೇ ವೇಳೆ ಯಡಿಯೂರಪ್ಪ ಅವರು ಜೈಲಿನಲ್ಲಿದ್ದಾಗ ಯಡಿಯೂರಪ್ಪ ಡೈರಿ ಬರೆದ ವಿಚಾರವಾಗಿ ಅವರ ಮಗಳು ಡೈರಿ ಬಿಡುಗಡೆ ಮಾಡುವುದು ನನಗೆ ಗೊತ್ತಿಲ್ಲ ಎಂದ ಅವರು,  ಹಿರಿಯ ನಾಯಕರ ಕಾಲಿಗೆ ಬಿದ್ದಿದ್ದರೆ ನಾನೂ ಸಿಎಂ ಆಗುತ್ತಿದ್ದೆ ಎಂಬ ಯತ್ನಾಳ್ ಹೇಳಿಕೆ ವಿಚಾರಗಳಿಗೆ ಪ್ರತಿಕ್ರಿಯಿಸಲ್ಲ ಎಂದರು.

ಮಾಜಿ ಸಿಎಂ ಎಚ್.ಡಿ.ಕೆ. ರಾಜಕೀಯ ನಿವೃತ್ತಿ ವಿಚಾರವನ್ನು ಯಾವ ಸಂದರ್ಭದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರದ್ದು ಇನ್ನೂ ನಿವೃತ್ತಿಯಾಗುವ ವಯಸ್ಸಲ್ಲ. ಇನ್ನೂ ಸೇವೆ ಮಾಡಬೇಕಿದೆ. ಚುನಾವಣೆ ಸಂದರ್ಭದಲ್ಲಿ ಇಂಥವೆಲ್ಲ ನಡೆಯುತ್ತಿರುತ್ತದೆ. ಜನ ಪ್ರಬುದ್ಧರಾಗಿದ್ದು, ಎಲ್ಲವನ್ನೂ ಗಮನಿಸುತ್ತಾರೆ. ಚುನಾವಣೆಯಿಂದ ಚುನಾವಣೆಗೆ ಇನ್ನೂ ಪ್ರಬುದ್ಧರಾಗಿದ್ದಾರೆ. ನಾವು ಮಾತನಾಡುವಾಗ ಅದರ ಹಿಂದಿರುವ ಕಲ್ಪನೆಯೂ ಇರಬೇಕು ಎಂದರು.

Leave a Reply

Your email address will not be published. Required fields are marked *

error: Content is protected !!