ಬ್ರಹ್ಮಾವರ: ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ “ಗೋಕುಲ್ ದಾಸ್ ಟ್ರೋಫಿ-2023”
ಬ್ರಹ್ಮಾಬರ: ಫೆ.27 (ಉಡುಪಿ ಟೈಮ್ಸ್ ವರದಿ) : ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ, ಕೇರಳ ಇವರ ಆಶ್ರಯದಲ್ಲಿ ಪ್ರಥಮ ಬಾರಿಗೆ ಕೊರಗ ಸಮಾಜ ಬಾಂಧವರಿಗಾಗಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಗೌರವ ಅಧ್ಯಕ್ಷರಾದ ದಿ.ಪಳ್ಳಿ ಗೋಕುಲ್ ದಾಸ್ ಇವರ ಸ್ಮರಣಾರ್ಥವಾಗಿ ಫೆ.25 ಮತ್ತು 26 ರಂದು ಎರಡು ದಿನಗಳ ಕಾಲ ಆಯೋಜಿಸಿದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಗೋಕುಲ್ ದಾಸ್ ಟ್ರೋಫಿ-2023 ಯಶಸ್ವಿಯಾಗಿ ನಡೆಯಿತು.
ಫೆ.25 ರಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತ ಹೆಗ್ಡೆ ಇವರು ಗೋಕುಲ್ ದಾಸ್ ಇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಪಂಧ್ಯಕೂಟವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭೆಯ ಸದಸ್ಯ ವಿ.ಪ್ರಭಾಕರ ಕುಂದಾಪುರ ಅವರು ಭಾಗವಹಿಸಿದರು.
ಫೆ.26 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಕಾಯರ್ ಪಲ್ಕೆ ಹಾಗೂ ಬಿಎಸ್‍ಎನ್‍ಎಲ್‍ನ ಎಜಿಎಂ ಆಗಿರುವ ಮೋಹನ್ ಅಡ್ವೆ ಅವರು ಭಾಗವಹಿಸಿದ್ದರು. ಉದ್ಘಾಟನಾ ಹಾಗೂ ಸಮಾರೋಪದ ಅಧ್ಯಕ್ಷತೆಯನ್ನು ಕೆ ಪುತ್ರನ್ ಹೆಬ್ರಿ ಇವರು ವಹಿಸಿದರು.
ಈ ಪಂಧ್ಯಕೂಟದಲ್ಲಿ ಪ್ರಥಮ ಸ್ಥಾನವನ್ನು ನಸೀಬ್ ಬೀಡಿನಗುಡ್ಡೆ ತಂಡ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ಪೀನಿಕ್ಸ್ ಶಿರೂರು ತಂಡ ತನ್ನದಾಗಿಸಿಕೊಂಡಿದೆ. ಅದೇ ರೀತಿ ಸೆಮಿ ಹಂತದಲ್ಲಿ ಪರಭಾವಗೊಂಡ ನವೋದಯ ಪಾಂಬೂರು ಹಾಗೂ ವಿವೇಕ್ ಸಾಲಿಗ್ರಾಮ ತಂಡಕ್ಕೆ ಸೆಮಿ ಫೈನಲಿಸ್ಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೋಕುಲ್ ದಾಸ್ ಟ್ರೋಫಿಯ ಪಂದ್ಯಕೂಟದ ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಕೌಷಿಕ್ (ನಸೀಬ್), ಉತ್ತಮ ಗೂಟರಕ್ಷಕರಾಗಿ ಅರ್ಜುನ್(ನಸೀಬ್), ಉತ್ತಮ ದಾಂಡಿಗನಾಗಿ ಸುರೇಂದ್ರ (ಫೀನಿಕ್ಸ್), ಉತ್ತಮ ಎಸೆತಗಾರನಾಗಿ ಶಿವರಾಜ್ ನಾಡ (ಫೀನಿಕ್ಸ್) ಹಾಗೂ ಸರಣಿ ಉದ್ದಕ್ಕೂ ಉತ್ತಮ ಪ್ರದರ್ಶನ ತೋರಿದ ನಶೀಬ್ ಬೀಡಿನಗುಡ್ಡೆಯ ಕೌಷಿಕ್ ಇವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಪಂದ್ಯಕೂಟಕ್ಕೆ ಸಂಪೂರ್ಣ ಸಹಕಾರವನ್ನು ವಿವೇಕ್ ಸಾಲಿಗ್ರಾಮ, ಎವರ್ ಗ್ರೀನ್ ಕಾವಡಿ ಹಾಗೂ ಗೆಳೆಯರ ಬಳಗ ಕಳ್ತೂರು ತಂಡಗಳು ನೀಡಿದ್ದವು, ಈ ಪಂದ್ಯಕೂಟದ ಪ್ರಥಮ ಬಹುಮಾನದ ಟ್ರೂಪಿಯನ್ನು ಮೋಹನ್ ಅಡ್ವೆ ಹಾಗೂ ದ್ವಿತೀಯ ಬಹುಮಾನದ ಟ್ರೋಫಿಯನ್ನು ಡಾ ಸಬಿತಾ ಗುಂಡ್ಮಿ ಇವರು ನೀಡಿದರು.