ರಾಜ್ಯದಲ್ಲಿ ಮೊದಲ ಬಾರಿಗೆ 150 ಸ್ಥಾನ ಗೆಲ್ಲುವ ಮೂಲಕ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ -ಅಣ್ಣಾ ಮಲೈ

ಉಡುಪಿ, ಫೆ.27 : ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಎಲ್ಲ ಐದು ಸೇರಿದಂತೆ ರಾಜ್ಯದಲ್ಲಿ ಮೊದಲ ಬಾರಿಗೆ 150 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಕರ್ನಾಟಕ ವಿಧಾನಸಭಾ ಚುನಾವಣೆಯ ರಾಜ್ಯ ಸಹ ಉಸ್ತುವಾರಿಯಾಗಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಇಂದು ಭೇಟಿ ನೀಡಿದ ಅವರು ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿ, ಕಾಂಗ್ರೆಸ್ ಮಾಡುವ ಆರೋಪಗಳಿಗೆ ನಮ್ಮ ಕಾರ್ಯಕರ್ತರು ಉತ್ತರ ನೀಡುವ ಅಗತ್ಯ ಇಲ್ಲ. ಅದರ ಬದಲು ಕಾರ್ಯಕರ್ತರು ಸಕಾರಾತ್ಮಕವಾಗಿ ಕೆಲಸ ಮಾಡಬೇಕು. ಅಭಿವೃದ್ಧಿಯಲ್ಲಿ ಕರ್ನಾಟಕ ದಕ್ಷಿಣ ಭಾರತದಲ್ಲೇ ಮುಂಚೂಣಿಯಲ್ಲಿದೆ. ಕರ್ನಾಟಕದಿಂದ ಹೊರಗೆ ನಿಂತು ನೋಡಿದಾಗ ಅಭಿವೃದ್ಧಿ ತಿಳಿಯುತ್ತದೆ. ಆದರೆ ನಿದ್ದೆಯಿಂದ ಎದ್ದ ಕಾಂಗ್ರೆಸ್ ಈಗ ಆರೋಪ ಮಾಡುತ್ತಿದೆ. ನಿದ್ದೆ ಮಾಡಿ ಹಲ್ಲುಜ್ಜಲು ಹೋಗುವ ಗ್ಯಾಪಲ್ಲಿ ಕಾಂಗ್ರೆಸ್ ಸದಾ ಆರೋಪ ಮಾಡುತ್ತದೆ ಎಂದು ಟೀಕಿಸಿದರು.

ಭಾರತದ ಅಭಿವೃದ್ಧಿ ಜೊತೆ ಕರ್ನಾಟಕ ಜನ ನಿಲ್ಲುತ್ತಾರೆ ಎಂದ ಅವರು, ನಮ್ಮ ಬಳಿ ಅಭಿವೃದ್ಧಿ ಇದೆ. ಡಬಲ್ ಎಂಜಿನ್ ಸರಕಾರ ಇದೆ ಶಿಕ್ಷಣ ಮತ್ತು ಜಿ.ಎಸ್.ಟಿ ತೆರಿಗೆ ಸಂಗ್ರಹ ಹಾಗೂ ಉದ್ಯಮದಲ್ಲಿ ಕರ್ನಾಟಕ ನಂಬರ್ ಒನ್ ಇದೆ. ನಾವು ಕೆಲಸ ಮಾಡಿದ್ದೇವೆ. ಅದನ್ನು ರಾಜ್ಯದ ಜನಕ್ಕೆ ಮುಟ್ಟಿಸುತ್ತೇವೆ ಎಂದರು. ಹಾಗೂ ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದೆ. ಮುಂದಿನ ಎಂ.ಪಿ. ಚುನಾವಣೆಗೆ ಕರ್ನಾಟಕ ಬಜೆಟ್ ನ ಶೇ.10 ಬಳಸುವ ಯೋಚನೆ ಮಾಡಿದೆ. ಬಾಯಿ ಇರುವುದು ಮಾತಾಡಲು, ಸುಳ್ಳು ಹೇಳಲು ಅಲ್ಲ ಎಂಬುದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕು ಎಂದು ಅವರು ಟೀಕಿಸಿದರು.

ಈ ವೇಳೆ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಲಿರುವ ಐದು `ಪ್ರಗತಿ ರಥ’ಗಳಿಗೆ ರಾಜ್ಯ ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಉಡುಪಿ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಉಡುಪಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನೋಹರ್ ಕಲ್ಮಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!