ಸುಳ್ಳು ಸುದ್ದಿ ನಂಬಿ ನನ್ನನ್ನು ಟೀಕಿಸಿದ್ದ ಕೆಲವು ಮಠಾಧೀಶರು ಸಿ.ಟಿ.ರವಿ ಬಗ್ಗೆ ಮೌನ: ಸಿದ್ದರಾಮಯ್ಯ

ಬೆಂಗಳೂರು ಫೆ.23 :”ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಸುಳ್ಳು ಸುದ್ದಿಯನ್ನೇ ಪ್ರಚಾರ ಮಾಡಿ ನನ್ನನ್ನು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಿದ ಬಿಜೆಪಿಯ ನಾಯಕರೆಲ್ಲರೂ ಈಗ ಸಿ.ಟಿ ರವಿ ಅವರ ಕೃತ್ಯದಿಂದಾಗಿ ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಭಟ್ಕಳದಲ್ಲಿ ಬಾಡೂಟ ಸವಿದು ನಾಗಬನ ಮತ್ತು ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಚಾರವಾಗಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಅವರು, ‘ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಬಿಜೆಪಿ ನಾಯಕರ ಸುಳ್ಳು ಸುದ್ದಿಯನ್ನು ನಂಬಿ ನನ್ನನ್ನು ಟೀಕಿಸಿದ್ದ ರಾಜ್ಯದ ಕೆಲವು ಮಠಾಧೀಶರು, ಸಿ.ಟಿ.ರವಿ ಅವರು ಮಾಂಸತಿಂದು ದೇವಸ್ಥಾನಕ್ಕೆ ಹೋಗಿರುವ ಬಗ್ಗೆ ಮೌನವಾಗಿರುವುದು ನನಗೆ ಅಚ್ಚರಿ ಉಂಟುಮಾಡಿದೆ’ ಎಂದು ಬರೆದುಕೊಂಡಿದ್ದಾರೆ.

”ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಸುಳ್ಳು ಸುದ್ದಿಯನ್ನೇ ಪ್ರಚಾರ ಮಾಡಿ ನನ್ನನ್ನು ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರು. ಆ ರೀತಿ ಅಪಪ್ರಚಾರ ಮಾಡಿದವರೆಲ್ಲರೂ ಈಗ ಸಿ.ಟಿ ರವಿ ಅವರ ಕೃತ್ಯದಿಂದಾಗಿ ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ” ಎಂದು ಟೀಕಿಸಿದ್ದಾರೆ.

”ಮಾಂಸ ತಿನ್ನುವುದು ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ವೈಯಕ್ತಿಕ ಆಯ್ಕೆಗಳು. ಇದು ರಾಜಕೀಯ ಚರ್ಚೆಯ ವಸ್ತು ಆಗಬಾರದು. ರಾಜಕೀಯ ನಾಯಕರು ಜನತೆಯ ಕಲ್ಯಾಣ, ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚಿಸಬೇಕು. ಪರದೂಷಣೆಯಲ್ಲಿ ನಿರತರಾಗಿರುವ ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ” ಎಂದು ಬರೆದುಕೊಂಡಿದ್ದಾರೆ.

”ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ವಿಡಿಯೋ ಜಗತ್ತಿಗೆಲ್ಲ ಸತ್ಯ ಸಾರುತ್ತಿರುವಾಗ “ತಾನು ತಿಂದದ್ದು ನಿಜ, ದೇವಸ್ಥಾನದ ಒಳಪ್ರವೇಶಿಸಿಲ್ಲ, ರಸ್ತೆಯಲ್ಲಿಯೇ ನಿಂತು ಕೈಮುಗಿದಿದ್ದೆ’’ ಎಂಬ ಸಿ.ಟಿ ರವಿ ಅವರ ವಾದ, ಸದಾ ಹಸಿಹಸಿ ಸುಳ್ಳು ಹೇಳುವ ಅವರ ಹುಟ್ಟು ಗುಣಕ್ಕೆ ತಕ್ಕ ಹಾಗೆ ಇದೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!