ಒಂದೇ ತಿಂಗಳಲ್ಲಿ 3 ಸಿ.ಎನ್.ಜಿ ಬಸ್ ಗಳು ಬೆಂಕಿಗಾಹುತಿ – 400 ಬಸ್ ಸಂಚಾರ ನಿರ್ಬಂಧಿಸಿದ ಬೆಸ್ಟ್ 

ಮುಂಬೈ ಫೆ.23 : ಒಂದೇ ತಿಂಗಳ ಅಂತರದಲ್ಲಿ ಮೂರು ಟಾಟಾ ಸಿಎನ್‌ಜಿ ಬಸ್‌ಗಳು ಬೆಂಕಿಗೆ ಆಹುತಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ  ಮುಂಬೈ ‘ವಿದ್ಯುತ್ ಪೂರೈಕೆ ಮತ್ತು ಸಾರಿಗೆ ಇಲಾಖೆ (ಬೆಸ್ಟ್) 400 ಟಾಟಾ ಸಿಎನ್‌ಜಿ ಬಸ್‌ಗಳ ಸಂಚಾರವನ್ನು ನಿರ್ಬಂಧಿಸಿದೆ ಎಂದು ತಿಳಿದು ಬಂದಿದೆ.

ಮುಂಬೈನ ಅಂದೇರಿಯ ರೈಲ್ವೆ ನಿಲ್ದಾಣದ ಸಮೀಪ ಬುಧವಾರ ಟಾಟಾ ಸಿಎನ್‌ಜಿ ಬಸ್‌ವೊಂದು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. 

ಎಂ/ಎಸ್ ಮಾತೇಶ್ವರಿ ಲಿಮಿಟೆಡ್ ಈ ಬಸ್‌ಗಳ ನಿರ್ವಹಣೆಯ ಹೊಣೆ ಹೊತ್ತಿದ್ದು, ಈ ಹಿಂದೆ ಕೂಡಾ ಎರಡು ಬಸ್‌ಗಳು ಇದೇ ರೀತಿ ಸಂಪೂರ್ಣ ಸುಟ್ಟು ಹೋಗಿದ್ದವು, ಒಂದೇ ತಿಂಗಳ ಅಂತರದಲ್ಲಿ ಒಂದೇ ಮಾದರಿಯ ಮೂರು ಬಸ್‌ಗೆ ಬೆಂಕಿಗಾಹುತಿಯಾಗಿರುವ ಹಿನ್ನಲೆಯಲ್ಲಿ ಬೆಸ್ಟ್’ ಈ ಬಸ್ ಗಳ ಸಂಚಾರ ನಿರ್ಬಂಧಿಸಿದೆ. 

ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಲೋಕೇಶ್ ಚಂದ್ರ ಪ್ರಕಟಣೆಯ ಮೂಲಕ ಈ ಬಗ್ಗೆ ಮಾಹಿತಿ ನೀಡಿ, ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸದಂತೆ ಮಾಡಲು, ಸುರಕ್ಷತೆಯನ್ನು ಮೂಲ ತಯಾರಕರು (ಟಾಟಾ )ಮತ್ತು ನಿರ್ವಾಹಕರು (ಎಂಎಸ್ ಮಾತೇಶ್ವರಿ ಲಿಮಿಟೆಡ್) ಖಚಿತಪಡಿಸಿಕೊಳ್ಳುವವರೆಗೂ ಎಲ್ಲಾ 400 ಬಸ್‌ಗಳ ಸಂಚಾರ ನಿರ್ಬಂಧಿಸಲು ‘ಬೆಸ್ಟ್’ ಆದೇಶಿಸಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!