ಫೆ.22-ಮಾ.5- ಶಿವಪಾಡಿ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ- ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ ಫೆ.21(ಉಡುಪಿ ಟೈಮ್ಸ್ ವರದಿ): ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗದ ಪ್ರಯುಕ್ತ ಫೆ.22 ರಿಂದ ಮಾ.5 ರ ವರೆಗೆ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಇಂದು ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷರಾಗಿರುವ ಶಾಸಕ ರಘುಪತಿ ಭಟ್ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ನಾಳೆ (ಫೆ.22)ಯಿಂದ ಆರಂಭಗೊಂಡು ಮಾ.5 ರ ವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಪ್ರತಿನಿತ್ಯ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಫೆ.22 ರಿಂದ ಮಾ.4 ರ ವರೆಗೆ ಪ್ರತಿದಿನ ಬೆಳಿಗ್ಗೆ 7.30 ಕ್ಕೆ ಅತಿರುದ್ರ ಯಾಗ ಮಂಟಪದಲ್ಲಿ ಋತ್ವಜರಿಂದ ಮಹಾನ್ಯಾಸ ಪೂರ್ವಕ ಶ್ರೀ ರುದ್ರ ಪುರಶ್ಚರಣ ನಡೆಯಲಿದೆ. ಸಂಜೆ 6 ಗಂಟೆಯಿಂದ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಲಿದೆ. ಫೆ.22 ರಂದು ದೇವಸ್ಥಾನದ ಪ್ರಾಂಗಣದಲ್ಲಿ ಬೆಳಿಗ್ಗೆ 7 ರಿಂದ ಫಲನ್ಯಾಸಪೂರ್ವಕ ಪ್ರಾರ್ಥನೆ, ಅರಣೀ ಮಥನಪೂರ್ವಕ ಅಗ್ನಿ ಜನನ, ಸಪರಿವಾರ ಶ್ರೀ ಉಮಾಮಹೇಶ್ವರ ದೇವರಿಗೆ ನವಕಪ್ರಧಾನ ಹೋಮ, ಪುರಸ್ಸರ ನವಕಲಶ ಅಭಿಷೇಕ , ಪ್ರಸನ್ನ ಪೂಜೆ , ಮಹಾ ಪೂಜೆ ನೆರವೇರಲಿದೆ. ಸಂಜೆ 5 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಕಳದ ಉಪನ್ಯಾಸಕರಾದ ಅಕ್ಷಯಾ ಗೋಖಲೆ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಸಂಜೆ 7 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಬಳಗದವರಿಂದ
‘ಯಕ್ಷ ಗಾಯನ ವೈಭವ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಫೆ.23 ರಂದು ಶ್ರೀ ನಾಗದೇವರ ಸನ್ನಿಧಿಯಲ್ಲಿ ಬೆಳಗೆ 8:30 ರಿಂದ ಆಶ್ಲೇಷ ಬಲಿ, ತಿಲಹೋಮ, ಪವಮಾನ ಹೋಮ, ಕೂಷ್ಮಾಂಡ ನವಕ ಪ್ರಧಾನ ಹೋಮ ಪುರಸ್ಸರ ನವಕಲಶ ಅಭಿಷೇಕ, ವಟ ಆರಾಧನೆ, ಪುಸನ್ನ ಪೂಜೆ, ಶ್ರೀ ಕ್ಷೇತ್ರಪಾಲ ಸನ್ನಿಧಿಯಲ್ಲಿ ಏಕ ಕಲಶಾಭಿಷೇಕ ನೆರವೇರಲಿವೆ. ಸಂಜೆ 5 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬಾಲ ವಾಗ್ಮಿ ಹಾರಿಕಾ ಮಂಜುನಾಥ್ ರಿಂದ ಉಪನ್ಯಾಸ ನಡೆಯಲಿದೆ. ಸಂಜೆ 7 ರಿಂದ 8 ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವಿದುಷಿ ಉಮಾಶಂಕರಿ ಉದಯಶಂಕರ್ ಮತ್ತು ಬಳಗದವರಿಂದ ಭಕ್ತಿ ಸಂಗೀತ, ರಾತ್ರಿ 8 ಗಂಟೆಯಿಂದ ಹರಿದಾಸರಾದ ಪ್ರತಿಮಾ ಕೋಡೂರು ಮತ್ತು ಬಳಗದವರಿಂದ ಹರಿಕಥೆ – ದಕ್ಷ ಯಜ್ಞ ನಡೆಯಲಿದೆ. ಹಾಗೂ ಫೆ.24 ರಂದು ಗಣ ಯಾಗಮಂಟಪದಲ್ಲಿ ಸಂಜೆ 5 ಗಂಟೆಯಿಂದ ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪ್ರಸಾದ ಶುದ್ಧಿ, ಯಾಗಕುಂಡ ಸಂಸ್ಕಾರ ಹೋಮ ನೆರವೇರಲಿವೆ. ಈ ವೇಳೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಜೆ 5 ರಿಂದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್, ಕಶೆಕೋಡಿ ಇವರಿಂದ ಧಾರ್ಮಿಕ ಉಪನ್ಯಾಸ ಹಾಗೂ ಸಂಜೆ 7 ಗಂಟೆಯಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳುನಾಡ ಗಾನ ಗಂಧರ್ವ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ “ಶಿವ ಗಾನಾಮೃತ” ನಡೆಯಲಿದೆ ಎಂದರು.

ಫೆ.25 ರಂದು ಗಣಯಾಗ ಮಂಟಪದಲ್ಲಿ ಬೆಳಗ್ಗೆ 8 ಗಂಟೆಯಿಂದ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ಆರಂಭವಾಗಲಿದೆ. ಬೆಳಗ್ಗೆ 11:45 ರಿಂದ ಗಣಯಾಗದ ಪೂರ್ಣಾಹುತಿ, ಬ್ರಹ್ಮಚಾರಿ ಆರಾಧನೆ, ಕನ್ನಿಕಾ ಆರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಶ್ರೀ ದೇವರಿಗೆ ಮಹಾಪೂಜೆ, ಮಹಾಸಂತರ್ಪಣೆ ನೆರವೇರಲಿವೆ. ಸಂಜೆ 5 ಗಂಟೆಯಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುದ್ದಿ ವಾಹಿನಿಯೊಂದರ ಸುದ್ದಿ ವಿಭಾಗದ ಮುಖ್ಯಸ್ಥರಾದ ಅಜಿತ್ ಹನುಮಕ್ಕನವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಸಂಜೆ 7 ಗಂಟೆಯಿಂದ ನಡೆಯುವ ಸಾಂಸಕೃತಿಕ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದರಾದ ಗಗನ್ ಗಾಂವ್ಕರ್, ಅನುರಾಧ ಭಟ್, ಸುನೀತಾ ಭಟ್ ಕೂಡುವಿಕೆಯಲ್ಲಿ “ಭಕ್ತಿ ಗಾನ ಸಿಂಚನ”, ರಾತ್ರಿ 8:30 ರಿಂದ ರಾಷ್ಟ್ರದೇವೋಭವಃ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸುವ ನೃತ್ಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರಿಂದ “ಪುಣ್ಯ ಭೂಮಿ ಭಾರತ” ನಡೆಯಲಿದೆ. ಹಾಗೂ ಫೆ.26 ರಂದು ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗ್ಗೆ 8ರಿಂದ, ಆಚಾರ್ಯಾದಿ ಋತ್ವಿಗ್ವರಣ, 10 ಋತ್ವಿಜರಿಂದ ಸಪ್ತಶತೀ ಪಾರಾಯಣ ಶ್ರೀಸೂಕ್ತ ಹೋಮ ನೆರವೇರಲಿದೆ. ಸಂಜೆ 5 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಮಿತಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರಿಂದ ಧಾರ್ಮಿಕ ಉಪನ್ಯಾಸ ಸಂಜೆ 7 ರಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಪರ್ಧಿನಿ ಸ್ಕೂಲ್ ಆಫ್ ಡಿವೈನ್ ಡ್ಯಾನ್ಸಿಂಗ್, ಬೆಂಗಳೂರು ಇವರಿಂದ ಭಾರತೀಯ ಶಾಸ್ತ್ರೀಯ ನೃತ್ಯ “ಮಹಾರುದ್ರ” , ನಾರಸಿಂಹ (ಒಳಿತಿನ ವಿಜಯದ ಕಥನ) – ನೃತ್ಯ ನಿಕೇತನ, ಕೊಡವೂರು ಇವರಿಂದ ನೃತ್ಯ ರೂಪಕ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಫೆ.27 ರಂದು ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗ್ಗೆ 08:30 ರಿಂದ ಋತ್ವಿಜರಿಂದ ಸಪ್ತಶತೀ ಪಾರಾಯಣ, ಮಹಾಮೃತ್ಯುಂಜಯ ಹೋಮ ನರವೇರಲಿವೆ. ಈ ವೇಳೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಜ್ಞಾನ ಭಾರತಿ ಪ್ರಕಾಶನ ನಿಯಮಿತ, ಮಂಗಳೂರು ಇದರ ಅಧ್ಯಕ್ಷ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಇವರಿಂದ ಧಾರ್ಮಿಕ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 7ರಿಂದ ವಿದುಷಿ ಪವನಾ ಬಿ. ಆಚಾರ್ಯ ಮತ್ತು ವಿದ್ಯಾರ್ಥಿಗಳಿಂದ ಏಕಾದಶ ವೀಣಾ ವಾದನ ಮತ್ತು 8.30ರಿಂದ ಸಾಲಿಗ್ರಾಮ ಮೇಳದವರಿಂದ ‘ಭೀಷ್ಮ ವಿಜಯ’ ಯಕ್ಷಗಾನ ಬಯಲಾಟ ನಡೆಯಲಿದೆ. ಹಾಗೂ ಫೆ.28 ರಂದು ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗ್ಗೆ 08:30 ರಿಂದ ಋತ್ವಿಜರಿಂದ ಸಪ್ತಶತೀ ಪಾರಾಯಣ, ಶ್ರೀ ಭಾಗ್ಯ ಸೂಕ್ತ ಹೋಮ ನೆರವೇರಲಿವೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಜೆ 5ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ ಇದರ ಅಧ್ಯಕ್ಷ ಮೋಹನ್ ಆಳ್ವ ಅವರಿಂದ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಸಂಜೆ 7ರಿಂದ ವಿದುಷಿ ರೂಪಾ ಕಿರಣ್, ಹಾಂಕಾಂಗ್ ಇವರಿಂದ ಭರತನಾಟ್ಯ ಹಾಗೂ 8 ಗಂಟೆಯಿಂದ ಸಾಯಿ ಶಕ್ತಿ ಕಲಾ ತಂಡ, ಉರ್ವ ಚಿಲಿಂಬಿ, ಮಂಗಳೂರು ಇವರಿಂದ ತುಳು ಪೌರಾಣಿಕ ನಾಟಕ ‘ಬೊಳ್ಳಿ ಮಲೆತ ಶಿವ ಶಕ್ತಿಲು’ ನಡೆಯಲಿದೆ ಎಂದು ತಿಳಿಸಿದರು.

ಮಾ.1 ರಂದು ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗೆ, 08:30 ರಿಂದ ಋತ್ವಿಜರಿಂದ ಸಪ್ತಶತೀ ಪಾರಾಯಣ, ಶ್ರೀ ಪುರುಷಸೂಕ್ತ ಹೋಮ ಮತ್ತು ಶತಚಂಡಿಕಾ ಯಾಗಮಂಟಪದಲ್ಲಿ ಸಾಯಂಕಾಲ 5ರಿಂದ ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪ್ರಸಾದ ಶುದ್ಧಿ, ಕುಂಡ ಸಂಸ್ಕಾರ ಹೋಮ ನೆರವೇರಲಿವೆ.ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಜೆ 5ರಿಂದ ಆಧ್ಯಾತ್ಮಿಕ ಪ್ರವಚನಕಾರರಾದ ರಾಜಯೋಗಿನಿ ಬಿ.ಕೆ ವೀಣಾ, ಶಿರಸಿ ಅವರಿಂದ ಶಿವಧ್ಯಾನದಿಂದ ಧನ್ಯತೆಯ ಜೀವನ ಎಂಬ ವಿಚಾರದ ಬಗ್ಗೆ ಧಾರ್ಮಿಕ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಜಾದೂಗಾರ ಪ್ರೊ. ಶಂಕರ್ ಹಾಗೂ ಜೂ. ಶಂಕರ್ ಅವರ ಗಿಲಿಗಿಲಿ ಮ್ಯಾಜಿಕ್ ತಂಡದಿಂದ ಜಾಗೃತಿಗಾಗಿ ಜಾದೂ – ಆಧ್ಯಾತ್ಮಿಕ ಜಾದೂ ಪ್ರದರ್ಶನ ಮತ್ತು ಗ್ಲೋ ಆರ್ಟ್ ಖ್ಯಾತಿಯ ಪ್ರಖ್ಯಾತ ಕಲಾವಿದ ವಿನಯ್ ಹೆಗಡೆ ಬೆಂಗಳೂರು ಇವರಿಂದ ಬ್ರಶ್ ಕ್ಯಾನ್‍ವಸ್ ಇಲ್ಲದೆ ಗಾಳಿಯಲ್ಲಿ ಬಿಡಿಸುವ ಶಿವ ಪರಮಾತ್ಮನ ವರ್ಣರಂಜಿತ ಅನಿಮೇಟ್ ಚಿತ್ತಾರ ವಿಸ್ಮಯ “ಗಾಳಿಯಲ್ಲಿ ಚಿತ್ತಾರ” ರಾತ್ರಿ 8 ಗಂಟೆಯಿಂದ ನಡೆಯಲಿದೆ. ಮಾ.2 ರಂದು ಶತಚಂಡಿಕಾ ಯಾಗಮಂಟಪದಲ್ಲಿ ಬೆಳಗ್ಗೆ 06:30 ರಿಂದ ಶತಚಂಡಿಕಾ ಯಾಗ, ಬೆಳಗ್ಗೆ 11:45 ಕ್ಕೆ ಪೂರ್ಣಾಹುತಿ, ಸುವಾಸಿನಿ ಆರಾಧನೆ, ಕನ್ನಿಕಾ ಆರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಶ್ರೀ ದೇವರಿಗೆ ಮಹಾಪೂಜೆ, ಮಹಾಸಂತರ್ಪಣೆ ನೆರವೇರಲಿವೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಅವರಿಂದ ಧಾರ್ಮಿಕ ಉಪನ್ಯಾಸ ರಾತ್ರಿ 7:30ರಿಂದ ಸಂಗೀತ ಶಾರದೆ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಭಕ್ತಿಗಾಯನ ನಡೆಯಲಿದೆ. ಮಾ.3 ರಂದು ದೇವಸ್ಥಾನದ ಪ್ರಾಂಗಣದಲ್ಲಿ ಸಾಯಂಕಾಲ 6 ರಿಂದ ಸಾಮೂಹಿಕ “ನಮಃ ಶಿವಾಯ” ಮಹಾಮಂತ್ರದ ಪುರಶ್ಚರಣ, ಶ್ರೀ ದೇವರಿಗೆ ಮಹಾಪೂಜೆ, ಪುಸಾದ ವಿತರಣೆ ನೆರವೇರಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಜೆ 5ರಿಂದ ಚಿಕ್ಕಮಗಳೂರಿನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸಿ.ಟಿ. ರವಿ ಅವರಿಂದ ದಿಕ್ಸೂಚಿ ಭಾಷಣ, ಬಳಿಕ 7:30ರಿಂದ ಪ್ರಸಿದ್ಧ ಶಾಸ್ತ್ರೀಯ ಗಾಯಕ ಜಯತೀರ್ಥ ಮೇವುಂಡಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.

ಮಾ.4 ರಂಂದು ಸಾಯಂಕಾಲ 5:15 ರಿಂದ ಶ್ರೀ ಕ್ಷೇತ್ರ ಶಿವಾಪಾಡಿಗೆ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸದಾನಂಗಳವರ ಆಗಮನ ಮತ್ತು ಸಭಾಮಂಟಪದಲ್ಲಿ ಸಾಯಂಕಾಲ 05.30 ರಿಂದ ಧೂಳಿಪಾದ ಪೂಜೆ, ಸಭಾ ಕಾರ್ಯಕ್ರಮ, ಜಗದ್ಗುರುಗಳ ಅನುಗ್ರಹ ಭಾಷಣ, ಶ್ರೀ ರಾಮಾನಂದ ಸ್ಮೃತಿ ಮಂಟಪದಲ್ಲಿ ಜಗದ್ಗುರುಗಳಿಂದ ಶ್ರೀ ಚಂದ್ರಮೌಳೀಶ್ವರಸ್ವಾಮಿಗೆ ಪೂಜೆ ನಡೆಯಲಿದೆ. ಸಂಜೆ 5 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮೀಗಳಿಂದ ಆಶೀರ್ವಚನ ಹಾಗೂ 7 ರಿಂದ ‘ಜೀ ಸರಿಗಮಪ’ ಖ್ಯಾತಿಯ ಮಕ್ಕಳಿಂದ ಸಂಗೀತ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಹಾಗೂ ಮಾರ್ಚ್ 05 ರ ಭಾನುವಾರ ಅತಿರುದ್ರ ಯಾಗಮಂಟಪದಲ್ಲಿ, ಬೆಳಗ್ಗೆ 06:30 ರಿಂದ ಏಕಾದಶಿ ಕುಂಡಗಳಲ್ಲಿ ಅತಿರುದ್ರ ಮಹಾಯಾಗ, ಬೆಳಗ್ಗೆ 11:30 ರ ಜಗದ್ಗುರುಗಳ ಸಾನಿಧ್ಯದಲ್ಲಿ ಪೂರ್ಣಾಹುತಿ, ಮಧ್ಯಾಹ್ನ 12:00 ಕ್ಕೆ ಜಗದ್ಗುರುಗಳಿಂದ ಶ್ರೀ ದೇವರಿಗೆ ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ, ಫಲಮಂತ್ರಾಕ್ಷತೆ ಮತ್ತು ಮಧ್ಯಾಹ್ನ 12:30 ಕ್ಕೆ ಪಲ್ಲಪೂಜೆ, ಮಹಾಸಂತರ್ವಣೆ ನೆರವೇರಲಿವೆ. ಅಪರಾಹ್ನ 2ರಿಂದ “ಕಾಶ್ಮೀರ ವಿಜಯ” ತಾಳಮದ್ದಲೆ ನಡೆಯಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!