ಕಲಬುರಗಿ ಬಿಜೆಪಿ ಮುಖಂಡನಿಗೆ ಹಲ್ಲೆ ಯತ್ನ, ಕಲ್ಲು ತೂರಾಟ

ಕಲಬುರಗಿ ಫೆ.20 : ತಾಲೂಕಿನಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ಮೇಲೆ ಕಲ್ಲು ತೂರಾಟ ನಡೆಸಿ  ಕೆಲವು ಕಿಡಿಗೇಡಿಗಳು ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿರೋದಾಗಿ ವರದಿಯಾಗಿದೆ.

ತಾಲ್ಲೂಕು ಬಂಜಾರ ಸಮಾಜದ ವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಮೆರವಣಿಗೆಯಲ್ಲಿ  ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸೇವಲಾಲ್ ಮಹಾರಾಜರ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಬಸವೇಶ್ವರ ವೃತ್ತದಿಂದ ತಾಲ್ಲೂಕು ಪಂಚಾಯಿತಿ ಕಚೇರಿವರೆಗೆ ಸಾಗುತ್ತಿತ್ತು. ಮಾರ್ಗದ ಮಧ್ಯದ ಬಸ್ ನಿಲ್ದಾಣ ಸಮೀಪ ಬರುತ್ತಿದ್ದಂತೆ, ಕೆಲ ಯುವಕರು ಡಿ.ಜೆ ಹಚ್ಚಿದ ವಾಹನದ ಮೇಲೆ ನಿಂತರು. ಇದೇ ವೇಳೆ ಮಣಿಕಂಠ ಅವರ ಬೆಂಬಲಿಗರು ಮಣಿಕಂಠ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿಯಲು ಮುಂದಾದರು. ಇದೇ ವೇಳೆ ಮೆರವಣಿಗೆಯಲ್ಲಿ ಇದ್ದ ಕೆಲವರು ಹೊತ್ತುಕೊಂಡು ಕುಣಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಕಾರಣದಿಂದ ಮಣಿಕಂಠ ಬೆಂಲಿಗರು ಮತ್ತು ಆಕ್ಷೇಪ ಎತ್ತಿದವರ ನಡುವೆ ವಾಗ್ವಾದ ನಡೆಯಿತು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಮಣಿಕಂಠ ಅವರ ಮೇಲೆ ಕೆಲವರು ಹಲ್ಲೆಗೆ ಯತ್ನಿಸಿದರು. ದೂರದಿಂದ ಗುಂಪಿನ ಮೇಲೆ ಅಪರಿಚಿತರು ಕಲ್ಲು ತೂರಿದ್ದರಿಂದ ಗುಂಪಿನಲ್ಲಿದ್ದ ಒಬ್ಬರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಅಲ್ಲಿಂದ ಕರೆದೊಯ್ಯಲಾಯಿತು ಎಂದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಪೊಲೀಸರು ಮಧ್ಯ ಪ್ರವೇಶಿಸಿ ಗುಂಪು ಗೂಡಿದವರ ಮೇಲೆ ಲಾಠಿ ಬೀಸಿ ಚದುರಿಸಿದರು. ಬಳಿಕ ಮಣಿಕಂಠ ಅವರನ್ನು ಪೊಲೀಸ್ ವಾಹನದಲ್ಲಿ ಕೆಲಹೊತ್ತು ಕೂಡಿಸಿ, ಬಳಿಕ ಅವರ ಕಾರಿನಲ್ಲಿ ವಾಪಸ್ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.

‌ಹಲ್ಲೆ ಮತ್ತು ಕಲ್ಲು ತೂರಾಟವನ್ನು ಖಂಡಿಸಿದ ಜಯಂತಿ ಆಯೋಜಕರು ಹೈದರಾಬಾದ್–ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆಗೆ ಮುಂದಾದರು. ಪೊಲೀಸರು ರಸ್ತೆಯಲ್ಲಿ ಪ್ರತಿಭಟನೆ ಮಾಡದಂತೆ ತಡೆದರು. ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಕ್ರಮಕ್ಕೆ ಒತ್ತಾಯಿಸಿದರು. ಈ ವೇಳೆ ಮಾಜಿ ಸಚಿವ ರೇವುನಾಯಕ ಬೆಳಮಗಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರಣಗೌಡ ಪಾಟೀಲ, ಮುಖಂಡರಾದ ಅಬ್ದುಲ್ ಸತ್ತಾರ, ಸುರೇಶ ರಾಠೋಡ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿ, ಅಲ್ಲಿಂದ ಕಳುಹಿಸಿದರು ಎಂದು ತಿಳಿದು ಬಂದಿದೆ.

ಮಣಿಕಂಠ ರಾಠೋಡು ಅವರು ಖರ್ಗೆ ಕುಟುಂಬಸ್ಥರ ವಿರುದ್ಧ ಅಧಿಕಾರ ದುರ್ಬಳಕೆ, ಸರ್ಕಾರಿ ಜಾಗ ಕಬಳಿಕೆಯಂತಹ ಆರೋಪ ಮಾಡಿ ಲೋಕಾಯುಕ್ತಕ್ಕೆ ದುರು ನೀಡಿದ್ದ. ‘ಶಾಸಕ ಪ್ರಿಯಾಂಕ್ ಖರ್ಗೆ ಅವರು ನನ್ನ ಹತ್ಯೆಗೆ ಸುಪಾರಿ ನೀಡಿದ್ದಾರೆ. ನನ್ನ ಹತ್ಯೆಗೆ ವಿಜಯಪುರ ಅಥವಾ ಸೊಲ್ಲಾಪುರ ಗ್ಯಾಂಗ್‍ಗೆ ಹೇಳಲಾಗಿದೆ’ ಎಂದು ಗಂಭಿರ ಆರೋಪ ಮಾಡಿದ್ದರು. ಜತೆಗೆ ‘ನೀವು ಎಕೆ-47ನಿಂದ ಶೂಟ್ ಮಾಡಿದರೂ ನಾನು ಸಾಯಲು ಸಿದ್ಧ. ತಮಗೂ ಶೂಟ್ ಮಾಡಲು ಸಿದ್ಧ’ ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲು ಹಾಕಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಇದೀಗ ಈ ಘಟನೆಗಳ ಬೆನ್ನಲ್ಲೆ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾಪುರದಲ್ಲಿ ಮಣಿಕಂಠ ರಾಠೋಡ ಅವರಿಗೆ ಹಲ್ಲೆ ಯತ್ನ ನಡೆದಿದೆ.

Leave a Reply

Your email address will not be published. Required fields are marked *

error: Content is protected !!