ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ – ಸಿದ್ದರಾಮಯ್ಯ ಟೀಕೆ
ಬೆಂಗಳೂರು ಫೆ.17 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್ ನ್ನು ಬಿಜೆಪಿ ಸರಕಾರದ ನಿರ್ಗಮನದ ಬಜೆಟ್ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ
ಬಜೆಟ್ ಬಗ್ಗೆ ಇಂದು ಪ್ರತ್ರಿಕ್ರಿಯೆ ನೀಡಿದ ಅವರು, ಇದು ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್. ಇನ್ನು 2 ತಿಂಗಳಲ್ಲಿ ಚುನಾವಣೆ ಇರುವುದರಿಂದ ಇದನ್ನು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ ಎನ್ನಬಹುದು. ಬಜೆಟ್ ಗಾತ್ರ 3,09,182 ಕೋಟಿ ಇದೆ. ಕಳೆದ ಬಜೆಟ್ ನಲ್ಲಿ ಏನೇನು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು, ಅದರಲ್ಲಿ 56 ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಲ್ಲ. 2018ರಲ್ಲಿ ಬಿಜೆಪಿ ಪಕ್ಷ ರಾಜ್ಯದ ಜನರಿಗೆ ಪ್ರಣಾಳಿಕೆ ಮೂಲಕ 600 ಭರವಸೆಗಳನ್ನು ನೀಡಿತ್ತು, ಇದರಲ್ಲಿ ಶೇ.90 ಭರವಸೆಗಳನ್ನು ಈಡೇರಿಸಿಲ್ಲ’ ಎಂದು ಹೇಳಿದರು.
‘ನಮ್ಮ ಸರ್ಕಾರದ ಅವಧಿಯಲ್ಲಿ 2 ಲಕ್ಷದ 2 ಸಾವಿರ ಕೋಟಿ ಬಜೆಟ್ ಗಾತ್ರ ಇತ್ತು, ಎಸ್,ಸಿ,ಪಿ/ಟಿ,ಎಸ್,ಪಿ ಯೋಜನೆಗೆ ನಾವು 30,000 ಕೋಟಿ ಹಣ ನೀಡಿದ್ದೆವು, ಆದರೆ ಈಗಿನ ಬಜೆಟ್ ಗಾತ್ರ 3 ಲಕ್ಷದ 9 ಸಾವಿರ ಕೋಟಿ ಇದ್ದರೂ ಈ ಯೋಜನೆಗೆ ನೀಡಿರುವ ಅನುದಾನ 30,000 ಕೋಟಿಯೇ ಇದೆ. ಹಿಂದಿನ ವರ್ಷ ಕರ್ಚಾಗಿರುವ ಹಣವನ್ನೂ ಹೇಳಿಲ್ಲ, ನನ್ನ ಪ್ರಕಾರ ಈ ಯೋಜನೆಗೆ ನೀಡುವ ಅನುದಾನ ಕನಿಷ್ಠ 50,000 ಕೋಟಿ ರೂ. ಆಗಬೇಕಿತ್ತು. ಇದು ದಲಿತರಿಗೆ, ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಮಾಡಿರುವ ದೊಡ್ಡ ದ್ರೋಹ’ ಎಂದು ಕಿಡಿಕಾರಿದರು.
‘ನಮ್ಮ ಸರ್ಕಾರದ ಕೊನೆಯ ಬಜೆಟ್ ನಲ್ಲಿ 5 ವರ್ಷದಲ್ಲಿ ನಮ್ಮ ಸರ್ಕಾರದ ಸಾಧನೆಗಳೇನು ಮತ್ತು ಮುಂದೆ ಅಧಿಕಾರಕ್ಕೆ ಬಂದಾಗ ಏನೇನು ಮಾಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೆವು, ಆದರೆ ಈ ಬಜೆಟ್ ಪುಸ್ತಕದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳ ಮಾಹಿತಿಯೇ ಇಲ್ಲ. ಕಳೆದ ಬಜೆಟ್ ನಲ್ಲಿ 206 ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು, ಅದರಲ್ಲಿ 56 ಕಾರ್ಯಕ್ರಮಗಳನ್ನು ಜಾರಿ ಮಾಡೇ ಇಲ್ಲ. ಇದಕ್ಕೆ ಸರ್ವಜ್ಞನ ವಚನ, “ಆಡದಲೆ ಮಾಡುವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು, ತಾನಾಡಿಯೂ ಮಾಡದವನು ಅಧಮನು” ಎಂಬ ವಚನ ಬಿಜೆಪಿ ಸರ್ಕಾರಕ್ಕೆ ಹೆಚ್ಚು ಹೊಂದಾಣಿಕೆಯಾಗುತ್ತದೆ’ ಎಂದು ಟೀಕಿಸಿದರು.
‘ಈ ವರ್ಷದ ಅಂತ್ಯಕ್ಕೆ 5,64,896 ಕೋಟಿ ರೂ. ಸಾಲ ಆಗುತ್ತದೆ ಎಂದು ಹೇಳಿದ್ದಾರೆ. ನಾವು ಅಧಿಕಾರದಿಂದ ಇಳಿದಾಗ ರಾಜ್ಯದ ಮೇಲೆ 2 ಲಕ್ಷದ 42 ಸಾವಿರ ಕೋಟಿ ರೂ. ಇತ್ತು, ಅಂದರೆ ಈಗ 3 ಲಕ್ಷದ 22 ಸಾವಿರ ಕೋಟಿ ಸಾಲ ಹೆಚ್ಚಾಗಿದೆ. 2018-19ರಲ್ಲಿ ಸಮ್ಮಿಶ್ರ ಸರ್ಕಾರ ಮಾಡಿದ್ದ ಸಾಲ 41,914 ಕೋಟಿ ರೂ. ಇದನ್ನು ಬಿಟ್ಟರೆ ಉಳಿದ ನಾಲ್ಕು ವರ್ಷದಲ್ಲಿ ಬಿಜೆಪಿ ಸರ್ಕಾರ 2,54,760 ಕೋಟಿ ರೂ. ಸಾಲ ಮಾಡಿದೆ. ಸ್ವಾತಂತ್ರ್ಯ ಬಂದ ನಂತರದಿಂದ ನಮ್ಮ ಸರ್ಕಾರದ ಕೊನೆಯವರೆಗೆ ಇದ್ದ ಸಾಲ 2 ಲಕ್ಷದ 42 ಸಾವಿರ ಕೋಟಿ, ನಮ್ಮ 5 ವರ್ಷಗಳ ಆಡಳಿತದಲ್ಲಿ ಮಾಡಿದ್ದ ಒಟ್ಟು ಸಾಲ 1,16,512 ಕೋಟಿ ರೂ. ಸಾಲ ಎಲ್ಲಾ ಕಾಲದಲ್ಲೂ ಎಲ್ಲ ಸರ್ಕಾರಗಳು ಮಾಡುತ್ತವೆ, ಆದರೆ ಬರೀ ನಾಲ್ಕೇ ವರ್ಷದಲ್ಲಿ 3,22,000 ಕೋಟಿ ಸಾಲ ಮಾಡಿದ್ದಾರೆ. ಸಾಲ ಹೆಚ್ಚಾಗಿರುವುದರಿಂದ ಕೇವಲ ಬಡ್ಡಿ ರೂಪದಲ್ಲಿ ನಾವು 34,000 ಕೋಟಿ ರೂ. ಹಣ ಪಾವತಿ ಮಾಡಬೇಕಾಗುತ್ತದೆ. ಈ ಸರ್ಕಾರ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದೆ, ಕೊಟ್ಟ ಭರವಸೆಗಳನ್ನು ಕೂಡ ಈಡೇರಿಸಿಲ್ಲ, ಬಡ್ಡಿ ರೂಪದಲ್ಲಿ ಹೆಚ್ಚು ಪಾವತಿ ಮಾಡಬೇಕಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೂ ಕಡಿಮೆಯಾಗುತ್ತದೆ. ಮುಂದಿನ ವರ್ಷಕ್ಕೆ 77,750 ಕೋಟಿ ಸಾಲ ಮಾಡುವುದಾಗಿ ಸರ್ಕಾರ ಹೇಳಿದೆ. ಸಾಲದ ಪ್ರಮಾಣ 95% ಹೆಚ್ಚಾಗಿದೆ. ಹೀಗಾದಾಗ ಬಜೆಟ್ ಅಭಿವೃದ್ಧಿಪರವಾಗಿರಲು ಹೇಗೆ ಸಾಧ್ಯ?’ ಎಂದು ಪ್ರಶ್ನೆ ಮಾಡಿದರು.
‘ಮಕ್ಕಳು ಸಾಕುವ ಜವಾಬ್ದಾರಿ ಇಲ್ಲದೆ ಹೋದರೆ ಎಷ್ಟು ಮಕ್ಕಳಾದ್ರೂ ಆಗಲಿ ಎಂದು ಸುಮ್ಮನಿರಬಹುದು, ಅದೇ ರೀತಿ ಅನುಷ್ಠಾನ ಮಾಡುವ ಜವಾಬ್ದಾರಿ ಇಲ್ಲದೆ ಹೋದರೆ ಎಷ್ಟು ಭರವಸೆಗಳನ್ನು ಬೇಕಾದರೂ ಕೊಡಬಹುದು ಎಂಬಂತಿದೆ ಈ ಬಜೆಟ್. ಇಲ್ಲಿ ಘೋಷಣೆ ಮಾಡಿರುವ ಯಾವ ಯೋಜನೆಯನ್ನು ಕೂಡ ಜಾರಿ ಮಾಡುವ ಬದ್ಧತೆ ಸರ್ಕಾರಕ್ಕಿಲ್ಲ. ಚುನಾಯಿತ ಸರ್ಕಾರಗಳು ಪಾರದರ್ಶಕವಾಗಿ ಮತ್ತು ಉತ್ತರದಾಯಿಯಾಗಿರಬೇಕು. ಮತದಾರರಿಂದ ಯಾವುದನ್ನೂ ಮುಚ್ಚಿಡಲು ಹೋಗಬಾರದು’ ಎಂದು ಹೇಳಿದರು.
ಕರ್ನಾಟಕದಿಂದ ವಿವಿಧ ತೆರಿಗೆಗಳ ರೂಪದಲ್ಲಿ 4 ಲಕ್ಷದ 75 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಕೇಂದ್ರ ತೆರಿಗೆಯಲ್ಲಿ ನಮ್ಮ ಪಾಲು 34,596 ಕೋಟಿ ರೂ. ಬರಲಿದೆ ಎಂದು ಅಂದಾಜು ಮಾಡಿದ್ದಾರೆ. ಮುಂದಿನ ವರ್ಷ 37,250 ಕೋಟಿ ರೂ. ಬರಲಿದೆ ಎಂದಿದ್ದಾರೆ. 37,000 ಕೋಟಿ ಕೇಂದ್ರ ಸರ್ಕಾರದ ಅನುದಾನಗಳು, ಬಜೆಟ್ ಎಸ್ಟಿಮೇಟ್ ನಲ್ಲಿ ಈ ವರ್ಷದಲ್ಲಿ 17,281 ಕೋಟಿ ಇತ್ತು, ಪರಿಷ್ಕøತ ಅಂದಾಜಿನಲ್ಲಿ 12,391 ಕೋಟಿ ರೂ. ಗೆ ಇಳಿದಿತ್ತು. ಅಂದರೆ ಕೇಂದ್ರ ಸರ್ಕಾರದ ಆರ್ಥಿಕ ನೆರವು 5,000 ಕೋಟಿ ಕಡಿಮೆಯಾಗಿದೆ ಎಂದು ಸರ್ಕಾರವೇ ಅಂದಾಜು ಮಾಡಿದೆ. ಮುಂದಿನ ವರ್ಷ 13,005 ಕೋಟಿ ಕೇಂದ್ರದ ಸಹಾಯಧನ ಬರಲಿದೆ ಎಂದು ಹೇಳಿದ್ದಾರೆ. ಇವೆರಡು ಒಟ್ಟು ಸೇರಿಸಿದ್ರೆ 50,257 ಕೋಟಿ ಆಗುತ್ತದೆ, ನಮ್ಮಿಂದ ವಸೂಲಾಗುವ ತೆರಿಗೆ 4 ಲಕ್ಷದ 75 ಸಾವಿರ ಕೋಟಿ. ಇದು ಕೇಂದ್ರ ಸರ್ಕಾರದಿಂದ ರಾಜ್ಯದ ಜನರಿಗೆ ಆಗಿರುವ ದೊಡ್ಡ ಅನ್ಯಾಯ ಎಂದರು.
‘ಇಂದು ಇಷ್ಟೊಂದು ಸಾಲ ಆಗಲು ಕೇಂದ್ರ ಸರ್ಕಾರದಿಂದ ಬರುತ್ತಿರುವ ಅನುದಾನ ಕಡಿಮೆಯಾಗುತ್ತಿರುವುದು ಕಾರಣ. ನಮ್ಮ ತೆರಿಗೆ ಪಾಲು, ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಕೇಂದ್ರದ ಪಾಲು ಕಡಿಮೆಯಾದದ್ದು ಹಾಗೂ ಕೇಂದ್ರದಿಂದ ಬರುವ ಆರ್ಥಿಕ ನೆರವಿನ ಪ್ರಮಾಣ ಇಳಿಕೆಯಾಗಿರುವುದರಿಂದ ಸುಮಾರು 80,000 ಕೋಟಿಯಷ್ಟು ಸಾಲ ಮಾಡಬೇಕಾಗಿದೆ’ ಎಂದು ವಿವರಿಸಿದರು. ‘ಸರ್ಕಾರಿ ನೌಕಕರಿಗೆ 7ನೇ ವೇತನ ಆಯೋಗ ರಚನೆ ಮಾಡಿರುವುದರಿಂದ ಸಂಬಳ ಜಾಸ್ತಿಯಾಗುತ್ತದೆ ಎಂಬ ನಿರೀಕ್ಷೆಯಿತ್ತು. ನಮ್ಮ ಸರ್ಕಾರ ಇದ್ದಾಗ 6ನೇ ವೇತನ ಆಯೋಗ ಜಾರಿ ಮಾಡಿ 10,600 ಕೋಟಿ ಅನುದಾನ ನೀಡಿದ್ದೆ. ಈ ಬಜೆಟ್ ನಲ್ಲಿ 7ನೇ ವೇತನ ಆಯೋಗದ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ’ ಎಂದು ತಿಳಿಸಿದರು.