21 ವರ್ಷ ಕಳೆದರೂ ಪೂರ್ಣವಾಗಿ ಪಾವತಿಯಾಗದ ವೇತನ – ಅಲೆವೂರಿನ ನಿವೃತ್ತ ಪ್ರಿನ್ಸಿಪಾಲ್ ಅಳಲು

ಉಡುಪಿ ಫೆ.14(ಉಡುಪಿ ಟೈಮ್ಸ್ ವರದಿ): ವಯೋ ನಿವೃತ್ತಿ ಪಡೆದು 21 ವರ್ಷ ಕಳೆದರೂ ತನಗೆ ನ್ಯಾಯವಾಗಿ ಸಿಗಬೇಕಾದ ನಿವೃತ್ತಿ ವೇತನದ ಪೂರ್ಣಪಾವತಿಗಾಗಿ ವಿದ್ಯಾ ಇಲಾಖೆಯ ಅಧಿಕಾರಿಗಳೊಂದಿಗೆ ಹೆಣಗಾಡುತ್ತಿರುವ 80 ವರ್ಷದ ವಯೋವೃದ್ದರೋರ್ವರು ಇದೀಗ ನ್ಯಾಯ ಪಡೆಯಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದ್ದಾರೆ.

ಈ ಪ್ರಕರಣದಲ್ಲಿ ಉಚ್ಛನ್ಯಾಯಾಲಯ ನೀಡಿದ್ದ ತೀರ್ಪನ್ನು ಕಡೆಗಣಿಸಿರುವ ವಿದ್ಯಾ ಇಲಾಖೆಯ ಅಧಿಕಾರಿಗಳು ತಪ್ಪು ಅಫಿದಾವಿತ್ ನೀಡುವ ಮೂಲಕ ನ್ಯಾಯಾಲಯದ ದಾರಿ ತಪ್ಪಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಕರಣದ ಹಿನ್ನಲೆ

ಕಾರ್ಕಳದ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಪ್ರಾಚಾರ್ಯ ರಘುಪತಿ ಭಟ್ ರವರು 2002 ರಲ್ಲಿ ನಿವೃತ್ತರಾಗಿದ್ದರು. ತನ್ನ ಪಿಂಚಣಿ ಮಂಜೂರಾತಿಗೆ ಅವಶ್ಯ ವಿರುವ ದಾಖಲೆಗಳನೆಲ್ಲಾ ಪಿಂಚಣಿ ಇಲಾಖೆಗೆ ಕಳುಹಿಸುವಂತೆ ನಿವೃತ್ತಿಗೆ ಮೂರು ತಿಂಗಳ ಮೊದಲೇ ಕಾಲೇಜು ಆಡಳಿತ ಮಂಡಳಿಯನ್ನು ವಿನಂತಿಸಿದ್ದರು. ಆದರೆ ಆಡಳಿತ ಮಂಡಳಿ ಹಾಗೂ ವಿದ್ಯಾ ಇಲಾಖೆಯ ದಿವ್ಯ ನಿರ್ಲಕ್ಷದಿಂದಾಗಿ 15 ವರ್ಷಗಳ ಕಾಲ ಪೆನ್ಷನ್ ಮಂಜೂರಾಗಲೇ ಇಲ್ಲ. ಅದಕ್ಕಾಗಿ ರಘುಪತಿ ಭಟ್ ಅವರು ಜಿಲ್ಲಾ ನ್ಯಾಯಾಲಯ ದಿಂದ ಸರ್ವೋಚ್ಚನ್ಯಾಯಾಲಯದ ವರೆಗೆ ದೀರ್ಘಕಾಲದ ನ್ಯಾಯಾಂಗ ಹೋರಾಟವನ್ನೇ  ಮಾಡಬೇಕಾಯಿತು.

ಅಂತೂ  2017 ರ ಅ. 17  ರಂದು ಅವರಿಗೆ 177 ತಿಂಗಳ ಪಿಂಚಣಿ ಬಾಕಿ  ಒಂದೇ ಗಂಟಿನಲ್ಲಿ ಸಂದಾಯವಾಯಿತು. ಈ ಮೊತ್ತವನ್ನು ತಡವಾಗಿ ಪಾವತಿಸಿರುವುದಕ್ಕೆ ನಿಯಮಾನುಸಾರ ಇಲಾಖೆಯು 15 ವರ್ಷಗಳ ಬಡ್ಡಿ ಸೇರಿಸಿರಬೇಕಿತ್ತು. ಈ ಕುರಿತು ಪೆನ್ಷನ್ ಇಲಾಖೆ ಬರೆದ ಪತ್ರದಲ್ಲಿ “ಪಿಂಚಣಿ ಬಾಕಿಯನ್ನು ನೀಡಿದ್ದೇವೆ. ಆದರೆ ಬಡ್ಡಿಗಾಗಿ ನೀವು ವಿದ್ಯಾ ಇಲಾಖೆಯನ್ನೇ ಸಂಪರ್ಕಿಸಿರಿ” ಎಂಬ ಷರಾ ಸೇರಿಸಿತ್ತು.

ಅಸಹಾಯಕರಾದ ಭಟ್ಟರು ಎರಡು ವರ್ಷಗಳ ಕಾಲ ಪಿಯೂಸಿ ಬೋರ್ಡಿನ ನಿರ್ದೇಶಕರಿಂದ ಹಿಡಿದು ವಿದ್ಯಾ ಇಲಾಖೆಯ ಕಾರ್ಯದರ್ಶಿಗಳ ವರೆಗೆ ಹತ್ತು ಹಲವು ಪತ್ರಗಳನ್ನು ಬರೆದರೂ ಅವರಾರೂ ಒಂದೇ ಒಂದು ಉತ್ತರ ನೀಡಲಿಲ್ಲ. ಉಪಾಯವಿಲ್ಲದೇ ಭಟ್ಟರು 2019 ರಲ್ಲಿ ಪುನಃ ಹೈಕೋರ್ಟ್ ಮೆಟ್ಟಲೇರಿದರು. ಸುಮಾರು 18 ತಿಂಗಳ ವಿಚಾರಣೆ ನಡೆಸಿದ ಉಚ್ಛನ್ಯಾಯಾಲಯವು 2021 ರ ಜನವರಿಯಲ್ಲಿ ತೀರ್ಪು ನೀಡಿ ಪಿಂಚಣಿ ಬಾಕಿ ಅವಧಿಗೆ ಶೇಕಡಾ 8 ರಂತೇ ಬಡ್ಡಿ ನೀಡುವಂತೆ ಆದೇಶಿಸಿತು . ಬಡ್ಡಿ ಪಾವತಿಗಾಗಿ ನಾಲ್ಕು ವಾರಗಳ ಗಡುವನ್ನೂ ವಿಧಿಸಿತು. ಮಾತ್ರವಲ್ಲ ಸರ್ಕಾರವು ಈ ಮೊತ್ತವನ್ನು ವಿಳಂಬಕ್ಕೆ ಕಾರಣರಾದವರಿಂದಲೇ ವಸೂಲು ಮಾಡುವ ನಿರ್ದೇಶವನ್ನೂ ನೀಡಿತು. ಆದರೆ 9  ತಿಂಗಳು ಕಳೆದರೂ ಹೈಕೋರ್ಟ್ ನೀಡಿದ ಆದೇಶದ ಪಾಲನೆಯಾಗಲೇ ಇಲ್ಲ. ಈ ಕುರಿತು ಭಟ್ಟರು ಬರೆದ ಪತ್ರಕ್ಕೂ ಅಧಿಕಾರಿಗಳು ಉತ್ತರಿಸಿದಿದ್ದುರಿಂದ ನ್ಯಾಯಾಂಗ ನಿಂದನಾ ದಾವೆ ಸಲ್ಲಿಸಲಾಯಿತು. ಇದೀಗ ನ್ಯಾಯಾಲಯಕ್ಕೆ ಹಾಜರಾದ ಸರಕಾರಿ ವಕೀಲರು ವಿವಿಧ ಇಲಾಖೆಗಳ ಅಧಿಕಾರಿಗಳು ಈ ಕುರಿತು ಕಾರ್ಯೋನ್ಮುಖರಾಗಿರುವುದರಿಂದ ಹಣಕಾಸು ಸಚಿವಾಲಯದಿಂದ ಒಪ್ಪಿಗೆ ಪಡೆಯಲು 3 ವಾರಗಳ ಅವಧಿ ಕೇಳಿದರು . ಅದಕ್ಕೂ ಉಚ್ಛನ್ಯಾಯಾಲಯವು ಅನುಮತಿ ನೀಡಿತು. ಆದರೆ ಮತ್ತೆ ಹೈ ಕೋರ್ಟ್ ನೀಡಿದ ಮೂರುವಾರಗಳ ಗಡುವು ಕಳೆದು ಹತ್ತು ತಿಂಗಳಾದರೂ ಬಡ್ಡಿ ಹಣ ಮಾತ್ರ ಪಾವತಿ ಆಗಲೇ ಇಲ್ಲ.

ಈ ನಡುವೆ 2022 ರ ಅ.4 ರಂದು ನ್ಯಾಯಾಲಯಕ್ಕೆ “ಮೆಮೊ” ಸಲ್ಲಿಸಲಾಯಿತು. ಇದೀಗ ವಿದ್ಯಾ ಇಲಾಖೆಯ ಅಧಿಕಾರಿಗಳಿಗೆ ಬಂಧನದ ಆದೇಶ ಬರುವುದು ಖಚಿತ ವೆಂದು ಮನವರಿಕೆ ಯಾದುದರಿಂದ ಇಲಾಖೆ ತನ್ನದೇ ರೀತಿಯಲ್ಲಿ ಲೆಕ್ಕಹಾಕಿ ಭಟ್ಟರಿಗೆ ನ್ಯಾಯವಾಗಿ ನೀಡಬೇಕಾದ ಬಡ್ಡಿಮೊತ್ತದ ಅರ್ಧಕ್ಕಿಂತಲೂ ಕಡಿಮೆ ಹಣವನ್ನು ಅವರ ಖಾತೆಗೆ ಜಮಾ ಮಾಡಿದೆ. ಮಾತ್ರವಲ್ಲದೆ “ನ್ಯಾಯಾಲಯದ ಆದೇಶ ಪಾಲಿಸಲಾಗಿದೆ” ಎಂಬ ತಪ್ಪು ಅಫಿದಾವಿತ್ ಸಲ್ಲಿಸಿದೆ.

ಈ ಪ್ರಕರಣದಲ್ಲಿ ಮೊದಲನೆಯದಾಗಿ ಪಿಂಚಣಿ ಪಾವತಿಸಲು 177 ತಿಂಗಳು ತಡಮಾಡಿದರು, ತಡವಾಗಿ ಪಾವತಿಸಲಾದ ಪಿಂಚಣಿಗೆ 8% ಬಡ್ಡಿ ಪಾವತಿಸುವಂತೆ ಹೈಕೋರ್ಟ್ ಆದೇಶವಿದ್ದರೂ 63 ತಿಂಗಳ ನಂತರ ಬಡ್ಡಿ ಪಾವತಿಸಲಾಯಿತು. ಬಡ್ಡಿ ಲೆಕ್ಕಾಚಾರದಲ್ಲೂ ತಪ್ಪೆಸಗಿ ಅರ್ಧಕ್ಕಿಂತಲೂ  ಕಡಿಮೆ ಪಾವತಿಮಾಡಿ ನ್ಯಾಯಾಲಯಕ್ಕೆ ಅಫಿದಾವಿತ್ ನೀಡಲಾಗಿದೆ.  ಈ ಅನ್ಯಾಯವನ್ನು “ಮೆಮೊ” ಒಂದರ ಮೂಲಕ ಉಚ್ಚನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಹಾಗಾದರೇ, 80 ವರ್ಷದ ರಘುಪತಿ ಭಟ್ಟರು ಈಗಾಗಲೇ 21 ವರ್ಷಗಳ ಹೋರಾಟ ನಡೆಸಿದ್ದಾರೆ. ಮುಂದೆ ಸಾಯುವವರೆಗೂ ನ್ಯಾಯಾಲಯಕ್ಕೆ ದಾವೆ ದಾಖಲಿಸುತ್ತಲೇ ಇರಬೇಕೆ ? ಎನ್ನುಂತಾಗಿದೆ ಇವರ ಪರಿಸ್ಥಿತಿ. 

ಇಂತಹ  ಅನ್ಯಾಯದ  ಪ್ರಕರಣಗಳಲ್ಲಿ  ನ್ಯಾಯಾಲಯದ  ಆದೇಶ  ಪಾಲಿಸುವುದು ಕಾರ್ಯಾಂಗದ  ಕರ್ತವ್ಯ. ಒಂದೊಮ್ಮೆ  ಆದೇಶ  ಪಡೆದಮೇಲೂ ಅದರ ಪಾಲನೆಯಾಗುದಿಲ್ಲ . ಆಗಲೂ  ಆದೇಶದ  ಪಾಲನೆ  ಯಾಗದಿದ್ದಾಗ ಬಂಧನದ ಆದೇಶ ತರಬೇಕು. ಪ್ರತಿ ಪ್ರಕರಣದಲ್ಲಿ ನ್ಯಾಯಾಂಗ ನಿಂದನಾ ದಾವೆ ಹೂಡುವುದು ಅವಶ್ಯವೇ? ಆಗಲೂ ಆದೇಶದ ಪಾಲನೆ ಆಗದಿದ್ದಾಗ  ಬಂಧನದ ವಾರಂಟ್ ತರುವುದು  ಅನಿವಾರ್ಯವೇ? ಎಂಬ ಪ್ರಶ್ನೆ ಮೂಡುತ್ತದೆ

ಪ್ರಾಚಾರ್ಯ ರಘುಪತಿ ಭಟ್ಟರ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಆದೇಶದ ಮೂರನೇ ಪ್ಯಾರಾದಲ್ಲಿ ಮುಖ್ಯ ಸಂಗತಿಯೊಂದಿದೆ. ಭಟ್ಟರಿಗೆ ಈ ಕೂಡಲೇ ನಿಯಮಾನುಸಾರ ಬಡ್ಡಿ ನೀಡಬೇಕು, ಈ ಬಡ್ಡಿಯ ಮೊತ್ತ ಹಾಗೂ ದಾವೆಗೆ ತಗಲಿದ ಖರ್ಚನ್ನು ಈ ಅನ್ಯಾಯಕ್ಕೆ ಕಾರಣರಾದವರಿಂದ ವಸೂಲಿ ಮಾಡಬೇಕು. ಪ್ರತಿಷ್ಠಾನ ಈಗಾಗಲೇ ಈ ಸಮಸ್ಯೆಗೆ ಇಲಾಖೆಯ ಅಧಿಕಾರಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿ ಎಷ್ಟು ಕಾರಣ ಎಂಬ ತನಿಖೆ ನಡೆಸುತ್ತಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಏಕೆಂದರೆ ಅಧಿಕಾರಿಗಳಾಗಲಿ ಆಡಳಿತ ಮಂಡಳಿಯಾಗಲಿ ಮಾಡಿದ ಅನ್ಯಾಯಕ್ಕೆ ಜನರ ತೆರಿಗೆ ಹಣ ಏಕೆ ಪೋಲಾಗಬೇಕು?. ದ್ರೋಹ ಎಸಗಿದವರು ತಕ್ಕ ಬೆಲೆ ತೆರಲೇಬೇಕು ಎಂದು ಪ್ರತಿಷ್ಠಾನ ಅಭಿಪ್ರಾಯ ಪಟ್ಟಿದೆ

Leave a Reply

Your email address will not be published. Required fields are marked *

error: Content is protected !!