ಚಕ್ರತೀರ್ಥ ವಿರುದ್ಧ ಬಿಲ್ಲವ ಸಂಘಟನೆಗಳ ಒಕ್ಕೂಟದಿಂದ ಕಪ್ಪು ಬಾವುಟ ಪ್ರದರ್ಶನ ಪ್ರತಿಭಟನೆ

ಉಡುಪಿ ಫೆ.11(ಉಡುಪಿ ಟೈಮ್ಸ್ ವರದಿ): ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಲು ವಿವಾದಿತ ಲೇಖಕ ರೋಹಿತ್ ಚಕ್ರತೀರ್ಥ ಅವರು ಆಗಮಿಸಿರುವುದನ್ನು ಖಂಡಿಸಿ ಇಂದು ಬಿಲ್ಲವ ಸಂಘಟನೆಗಳ ಒಕ್ಕೂಟದ ವತಿಯಿಂದ ಕಪ್ಪುಬಟ್ಟೆ ಪ್ರದರ್ಶಿಸಿ ಎಂಜಿಎಂ ಮೈದಾನದ ಸಮ್ಮೇಳನದ ದ್ವಾರದ ಬಳಿ ಪ್ರತಿಭಟನೆ ನಡೆಯುತ್ತಿದೆ.

ಬನ್ನಂಜೆಯಿಂದ ಹೊರಟ ಕಾಲ್ನಡಿಗೆಯಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲಾಯಿತು. ಈ ನಡುವೆ ಸಮ್ಮೇಳನದ ದ್ವಾರದಲ್ಲಿ ಪ್ರತಿಭಟಕಾರರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಐವತ್ತುಕ್ಕೂ ಹೆಚ್ಚು ಪ್ರತಿಭಟನಾಕಾರರು ಚಕ್ರತೀರ್ಥ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಈ ವೇಳೆ ಮಾತನಾಡಿದ ಗೆಜ್ಜೆಗಿರಿ ಯಕ್ಷಗಾನ ಮೇಳದ ಜಿಲ್ಲಾ ಸಂಚಾಲಕ ನವೀನ್ ಅಮೀನ್ ಶಂಕರಪುರ ಅವರು, ರೋಹಿತ್ ಚಕ್ರತೀರ್ಥರಿಂದ ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಿಸುವ ಮೂಲಕ ಯಾವ ಸಂದೇಶ ನೀಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ತೆಗೆದು ಹಾಕುವ ಮೂಲಕ ಇಡೀ ದೇಶಕ್ಕೆ ಸಂದೇಶ ಸಾರಿರುವ ಮಹಾನ್ ವ್ಯಕ್ತಿಗೆ ಅಗೌರವ ತೋರಿರುವ ರೋಹಿತ್ ಚಕ್ರತೀರ್ಥರನ್ನು ಇಲ್ಲಿಂದ ಓಡಿಸುವ ಪ್ರಯತ್ನ ಮಾಡಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಠ್ಯ ಪುಸ್ತಕದಲ್ಲಿ ಇನ್ನಷ್ಟು ಮಾರಕ ಬರಹಗಳು ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಹಾಗೂ ಇದು ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನದ ವಿರುದ್ಧದ ಪ್ರತಿಭಟನೆ ಅಲ್ಲ. ನಾವು ಕೂಡಾ ಯಕ್ಷಗಾನದ ಅಭಿಮಾನಿಗಳೇ. ಆದರೆ, ನಮ್ಮದು ಒಬ್ಬ ವ್ಯಕ್ತಿ ವಿರುದ್ಧದ ಪ್ರತಿಭಟನೆ. ಇದಕ್ಕೆ ಪೊಲೀಸ್ ಅಧಿಕಾರಿಗಳು, ಈ ಸಮ್ಮೇಳನ ಸಂಘಟಿಸಿದವರು ಸಹಕಾರ ನೀಡಬೇಕು. ಅಯೋಗ್ಯ ರೋಹಿತ್ ಚಕ್ರಚೀರ್ಥರಂತವರಿಂದ ಉಡುಪಿಯಲ್ಲಿ ಬಾಷಣ ಮಾಡಿಸುವ ಅಗತ್ಯ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಅವರು, ಇಂದು ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ನಾರಾಯಣ ಗುರುಗಳ ಸಂದೇಶ ಯುವಕರಿಗೆ ಅಗತ್ಯವಾಗಿದೆ. ಅಂತಹ ಸಂದೇಶವನ್ನು ಪಠ್ಯ ಪುಸ್ತಕದಿಂದ ತೆಗೆದ ಕ್ರೂರ ವ್ಯಕ್ತಿ ರೋಹಿತ್ ಚಕ್ರತೀರ್ಥ. ಅಷ್ಟೇ ಅಲ್ಲದೆ, ಕುವೆಂಪು ಅವರ ನಾಡ ಗೀತೆಯನ್ನು ಅಗೌರವವಾಗಿ ತೋರಿದ, ಯಕ್ಷಗಾನದ ಗಂಧ-ಗಾಳಿಯೂ ಗೊತ್ತಿಲ್ಲದ ವ್ಯಕ್ತಿಯನ್ನು ಯಕ್ಷಗಾನ ಸಮ್ಮೇಳನದ ದಿಕ್ಸೂಚಿ ಭಾಷಣಕ್ಕೆ ಕರೆದಿರುವುದನ್ನು ಖಂಡಿಸುತ್ತೇವೆ. ಈ ಕರಾವಳಿ ಭಾಗದಲ್ಲಿ ಚಕ್ರತೀರ್ಥ ಮನೋಪ್ರವೃತ್ತಿಯನ್ನು ಪ್ರದರ್ಶಿಸಬಾರದು ಎಂದು ಮನವಿ ಮಾಡಿಕೊಂಡರು.

ಈ ವೇಳೆ ಪ್ರತಿಭಟನಾಕಾರರು, ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಅಗೌರವ ತೋರಿ 10ನೇ ತರಗತಿಯ ಪಠ್ಯ ಪುಸ್ತಕದಿಂದ ನಾರಾಯಣ ಗುರುಗಳ ಪಾಠವನ್ನು ಕೈ ಬಿಟ್ಟ ಪಾಠ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದ ದಿಕ್ಸೂಚಿ ಭಾಷಣದಿಂದ ಕೈ ಬಿಡದಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಜಿಲ್ಲಾಧ್ಯಕ್ಷ ಸುನಿಲ್ ಬಂಗೇರ, ದಿವಾಕರ್ ಸನಿಲ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಜಗನ್ನಾಥ ಕೋಟೆ ಸಹಿತ ಅನೇಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!