ನಟ ಸುದೀಪ್, ಡಿ.ಕೆ. ಶಿವಕುಮಾರ್ ಭೇಟಿ: ಫೋಟೋ ಹಿಂದಿನ ಅಸಲಿ ಸತ್ಯ ಏನು?
ಬೆಂಗಳೂರು ಫೆ.3 : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಟ ಸುದೀಪ್ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಈ ಭೇಟಿ ಭಾರೀ ಕುತೂಹಲ ಮೂಡಿಸಿದ್ದು, ನಿನ್ನೆ ರಾತ್ರಿ ಸುದೀಪ್ ಅವರನ್ನು ಭೇಟಿ ಮಾಡಿರುವ ಡಿಕೆಶಿ ಅವರು, ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂಬ ಸುದ್ದಿಗಳು ಹರಿದಾಡಿದ್ದವು.
ಆದರೆ ಈ ಭೇಟಿ ಬಗ್ಗೆ ಸುದೀಪ್ ಅವರ ಆಪ್ತರಲ್ಲಿ ವಿಚಾರಿಸಿದಾಗ, ಅದು ರಾಜಕೀಯ ಭೇಟಿ ಅಲ್ಲ ಎಂದು ಗೊತ್ತಾಗಿದೆ. ಡಿಕೆಶಿ ಒಡೆತನದ ಮಾಲ್ ವೊಂದರಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಉದ್ಘಾಟನೆಗೆ ಸುದೀಪ್ ಅವರನ್ನು ಆಹ್ವಾನಿಸಲು ಹೋಗಿದ್ದರು ಎಂದು ತಿಳಿದು ಬಂದಿದೆ.
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮೂಲಕ ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದವು. ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಸುದೀಪ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆಗಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.
ಇನ್ನು ನಟ ಸುದೀಪ್ ಡಿಕೆಶಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು, ಸುದೀಪ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಭೇಟಿ ಆಗಿರಬಹುದು. ಅವರು ಪಕ್ಷಕ್ಕೆ ಬಂದರೆ ಸ್ವಾಗತ. ನಮ್ಮ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರುವುದು ಅವರಿಗೂ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗೂ ಬಿಟ್ಟ ವಿಚಾರವಾಗಿದೆ. `ಪಕ್ಷ ಸೇರ್ಪಡೆ ಆದರೆ ಪ್ರಚಾರದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಬಹುದು. ನಾನು ಸುದೀಪ್ ಅವರನ್ನು ಸದ್ಯ ಭೇಟಿಯಾಗಿಲ್ಲ, ಈ ಕುರಿತು ಮಾತುಕತೆ ಮಾಡಿಲ್ಲ. ರಾಜ್ಯದಲ್ಲಿ ಸಿನಿಮಾ ನಟರು ರಾಜಕೀಯಕ್ಕೆ ಬರುವುದಕ್ಕೆ ಸ್ವಲ್ಪ ಯೋಚನೆ ಮಾಡ್ತಾರೆ’ ಎಂದು ಹೇಳಿದರು.