ಉಡುಪಿ- ಕೈಮಗ್ಗ ನೇಕಾರಿಕೆ ಪುನರುಜ್ಜೀವನಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ

ಉಡುಪಿ ಫೆ.2 (ಉಡುಪಿ ಟೈಮ್ಸ್ ವರದಿ): ವೃತ್ತಿಪರ ಕೈಮಗ್ಗ ನೇಕಾರಿಕೆಗೆ ವಿಶೇಷ ಪ್ರೋತ್ಸಾಹ ನೀಡಿ ಸುಧಾರಿತ ಕೈಮಗ್ಗ ನೇಕಾರಿಕೆಗೆ ತರಭೇತಿ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ವಿಸ್ತೃತ ಯೋಜನಾ ವರದಿಯನ್ನು ತಕ್ಷಣ ರಚಿಸಿ ನೀಡುವಂತೆ ಜಿಲ್ಲಾಧಿಕಾರಿಯವರು ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ದೆಹಲಿಯ ಕೈಮಗ್ಗ ಸೇವಾ ಕೇಂದ್ರದ ವಲಯ ನಿರ್ದೇಶಕ ಮುತ್ತುಸ್ವಾಮಿ, ನೇಕಾರ ಸೇವಾ ಕೇಂದ್ರ ಬೆಂಗಳೂರಿನ ಸಹಾಯಕ ನಿರ್ದೇಶಕ ಮಾರಿಮುತ್ತು, ತಾಂತ್ರಿಕ ಅಧೀಕ್ಷಕ ಮೋಹನ್, ತಾಂತ್ರಿಕ ಸಲಹೆಗಾರ ತುಳಸೀರಾಮ್, ಉಡುಪಿ ಜಿಲ್ಲೆಯ ಪ್ರೊಬೇಷನರಿ ಐಎಎಸ್ ಅಧಿಕಾರಿ ಯತೀಶ್, ಉಡುಪಿ ಜಿಲ್ಲಾ ಕೈ ಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ್, ಉಪ ನಿರ್ದೇಶಕ ಸೀತಾರಾಮ್ ಶೆಟ್ಟಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್ ಆಚಾರ್ಯ, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಉಡುಪಿ ಪ್ರಾಥಮಿಕ ನೇಕಾರ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ, ಸಿಇಒ ದಿನೇಶ್ ಕುಮಾರ್, ಶಿವಳ್ಳಿ ಸೊಸಾಯಿಟಿಯ ಸಿಇಒ ಶಶಿಕಾಂತ್ ಕೋಟ್ಯಾನ್ ಉಪಸ್ಥಿತರಿದ್ದರು.

ಸಭೆಗೂ ಮೊದಲು ದೆಹಲಿಯ ನೇಕಾರ ಸೇವಾ ಕೇಂದ್ರದ ವಲಯ ನಿರ್ದೇಶಕರ ನೇತೃತ್ವದ ನಿಯೋಗವು ಉಡುಪಿಯಲ್ಲಿ ನೇಕಾರಿಕೆ ನಡೆಸುತ್ತಿರುವ ಸೋಮಪ್ಪ ಜತ್ತನ್, ಭಾರತಿ ಶೆಟ್ಟಿಗಾರ್ ಮತ್ತು ಜಾನ್ ಅಮ್ಮನ್ನ ರವರ ಮನೆಗೆ ಹಾಗೂ ಉಡುಪಿ ಪ್ರಾಥಮಿಕ ನೇಕಾರ ಸಹಕಾರಿ ಸಂಘದ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡಿತ್ತು.

Leave a Reply

Your email address will not be published. Required fields are marked *

error: Content is protected !!