ಆರ್.ಎಸ್.ಎಸ್ ಪ್ರೀತಿಗಳಿಸಲು ಪೆದ್ದ ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು, ಜ.26: ನೆನ್ನೆ ಮೊನ್ನೆ ಬಿಜೆಪಿಗೆ ಹೋದ ಸಚಿವ ಸುಧಾಕರ್ ತುರ್ತಾಗಿ ಆರೆಸ್ಸೆಸ್ ನವರ ಪ್ರೀತಿಗಳಿಸಲು ಮೂಲ ಬಿಜೆಪಿಯವರಿಗಿಂತ ಭಯಾನಕ ಸುಳ್ಳು ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ತಮ್ಮ ವಿರುದ್ಧ ಮಾಡಿರುವ 35 ಸಾವಿರ ಕೋಟಿ ರೂ.ಭ್ರಷ್ಟಾಚಾರದ ಆರೋಪಕ್ಕೆ ಸಮಗ್ರ ದಾಖಲೆಗಳ ಸಮೇತ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಸಚಿವ ಸುಧಾಕರ್ ಒಬ್ಬ ಪೆದ್ದ. ಸಿಎಜಿ ರಿಪೋರ್ಟ್ ಓದೋಕೆ, ಅರ್ಥ ಮಾಡಿಕೊಳ್ಳೋಕೆ ಬರೋದಿಲ್ಲ. ಸಚಿವ ಸುಧಾಕರ್ ಆರೋಪಕ್ಕೂ-ಸಿಎಜಿ ವರದಿಯಲ್ಲಿ ಇರುವುದಕ್ಕೂ ಒಂದಕ್ಕೊಂದು ಸಂಬಂಧವೆ ಇಲ್ಲ. ಸಿಎಜಿಯವರು 2016-17 ಸಾಲಿನ ವರದಿಯನ್ನು 2018ರಲ್ಲಿ ಕೊಟ್ಟಿದ್ದಾರೆ. ಅದರಲ್ಲಿ ಪುಟ ಸಂಖ್ಯೆ ಘಿಗಿ ರಲ್ಲಿ “Non reconciliation of expenditure was to the extent of 19 percent of total expenditure” ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಈ ಹೇಳಿಕೆಯನ್ನು ಆಧರಿಸಿ 2016-17ನೆ ಸಾಲಿನ ಆರ್ಥಿಕ ವರ್ಷದ ಆಯವ್ಯಯದಲ್ಲಿ 1,86,052 ಕೋಟಿ ರೂಗಳಲ್ಲಿ ಶೇ.19(35 ಸಾವಿರ ಕೋಟಿ) ತಾಳೆಯಾಗುತ್ತಿಲ್ಲವೆಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದು ನನ್ನ ಸರಕಾರ ನಡೆಸಿರುವ ಅವ್ಯವಹಾರ, ಭ್ರಷ್ಟಾಚಾರಗಳನ್ನು ದೃಢೀಕರಿಸಿದಂತಾಗುತ್ತದೆ ಎಂದು ಪೆದ್ದ ಸುಧಾಕರ್ ಆರೋಪಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

2008-09 ರಲ್ಲಿ ತಾಳೆಯಾಗದ ಅನುದಾನ ಶೇ.49ರಷ್ಟು ಇತ್ತು. ಆಗ ಯಾವ ಸರಕಾರ ಇತ್ತು ಗೊತ್ತೇನಪ್ಪಾ ಸುಧಾಕರ ಎಂದ ಅವರು, 2015-16ರಲ್ಲಿ ಶೇ.16ರಷ್ಟು ಮಾತ್ರ ತಾಳೆಯಾಗದ ಅನುದಾನ ಆಗಿತ್ತು. ಈ ಮೂರ್ಖರಿಗೆ ಇದು ಅರ್ಥ ಆಗಬೇಕಾ ಬೇಡವಾ? ಬಿಜೆಪಿಯಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದರೆ ಅತಿ ದೊಡ್ಡ ಲೀಡರ್ ಆಗಬಹುದು ಎನ್ನುವುದು ಸುಧಾಕರ್ ಗೆ ಬಹಳ ಬೇಗ ಅರ್ಥ ಆಗಿದೆ ಎಂದು ಅವರು ಟೀಕಿಸಿದರು.

ಈ ರೀಕನ್ಸಿಲೆಶನ್ ವಿಚಾರದಲ್ಲಿ ನಮ್ಮ ಸರಕಾರವೆ ಸಾಕಷ್ಟು ಸುಧಾರಣೆಗಳನ್ನು ಸಾಧಿಸಿದೆ ಎಂದು ವರದಿ ಹೇಳುತ್ತಿದೆ. ಇದರ ಪ್ರಕಾರ ಬಿಜೆಪಿ ಸರಕಾರದಲ್ಲಿ ಶೇ.50ರಷ್ಟು ರೀಕನ್ಸೈಲ್ ಆಗುತ್ತಿರಲಿಲ್ಲ. ಆದರೆ ನಾವು ತೆಗೆದುಕೊಂಡ ಕ್ರಮಗಳಿಂದ ಈ ಪ್ರಮಾಣ ಶೇ.16 ರಿಂದ 18 ರಷ್ಟು ಮಾತ್ರ ಬಾಕಿ ಉಳಿಯುತ್ತಿತ್ತು. ಮೆಚ್ಚುಗೆ ಸೂಚಿಸಬೇಕಾದ್ದಕ್ಕೆ ಭ್ರಷ್ಟಾಚಾರ ಅಂತ ಕರೆದಿದೆ ಈ ಪೆದ್ದು ಎಂದು ಅವರು ವ್ಯಂಗ್ಯವಾಡಿದರು.

ಭ್ರಷ್ಟಾಚಾರ ಎಂದರೆ ಯಾವುದು ಗೊತ್ತಾ ಸುಧಾಕರ್ ಎಂದು ಸಚಿವರನ್ನು ಪ್ರಶ್ನಿಸಿದ ಅವರು, ಕೊರೋನ ಸಮಯದಲ್ಲಿ ಹೆಣಗಳ ವಿಚಾರದಲ್ಲೂ ಲಂಚ ಹೊಡೆಯುವುದು ಭ್ರಷ್ಟಾಚಾರ. 2020-21ರಲ್ಲೆ ಸುಮಾರು 3000 ಕೋಟಿ ರೂ.ಗಳಷ್ಟು ಕೊರೋನ ಭ್ರಷ್ಟಾಚಾರ ನಡೆದಿದೆಯೆಂದು ಆಗಿನ ಪಬ್ಲಿಕ್ ಅಕೌಂಟ್ಸ್ ಕಮಿಟಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ಸ್ಪೀಕರ್ ಗೆ ವರದಿ ಕೊಟ್ಟಿದ್ದಾರೆ. ಆದರೆ, ಈ ಸ್ಪೀಕರ್ ಮಹಾಶಯರು ವರದಿಯನ್ನು ಸದನದಲ್ಲಿ ಮಂಡಿಸದೆ ಆರೆಸ್ಸೆಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಕೊರೋನದಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ ಕುರಿತು ಆಡಿಟ್ ತನಿಖೆ ಮಾಡಲು ಪಬ್ಲಿಕ್ ಅಕೌಂಟ್ಸ್ ಕಮಿಟಿಯು ಎಜಿಗೆ ಪತ್ರ ಬರೆದು ಕೋರಿದ್ದರು. ಆದರೆ ಎಜಿಯವರು ಆಡಳಿತ ಇಲಾಖೆಯು ಪತ್ರ ಬರೆಯಬೇಕು ಎಂದು ತಿಳಿಸಿದ್ದರು. ಆದರೆ, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಆಡಿಟ್ ತನಿಖೆ ಮಾಡಲು ಎಜಿಯವರಿಗೆ ಅನುಮತಿ ಕೊಡಲೆ ಇಲ್ಲ ಎಂದು ಹೇಳಿದರು.

ಸುಧಾಕರ್ ಭ್ರಷ್ಟ ಅಲ್ಲದಿದ್ದರೆ ಆಡಿಟ್ ತನಿಖೆ ಮಾಡಲು ಒಪ್ಪಿಗೆ ಕೊಡಬೇಕಾಗಿತ್ತಲ್ಲ?, ಯಾಕೆ ಅವಕಾಶ ಕೊಡಲಿಲ್ಲ? ಎನ್ನುವುದಕ್ಕೆ ಸುಧಾಕರ್ ಉತ್ತರ ಕೊಡಬೇಕು. ಕೃಷಿ, ತೋಟಗಾರಿಕೆ, ಗೃಹ ಮತ್ತು ಸಾರಿಗೆ, ಲೋಕೋಪಯೋಗಿ ಇಲಾಖೆಗಳಲ್ಲಿ 1085 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಆರೋಪಿಸಿದ್ದಾರೆ. ಎಜಿ ಇದನ್ನು ಅವ್ಯವಹಾರ, ಭ್ರಷ್ಟಾಚಾರ ಎಂದು ಹೇಳಿಲ್ಲ. ಬಜೆಟ್ ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಖರ್ಚಾಗಿದೆ ಎಂದಷ್ಟೇ ವರದಿ ಹೇಳುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ವೈಟ್ ಟಾಪಿಂಗ್ ಯೋಜನೆಯಲ್ಲಿ ಅವ್ಯವಹಾರ ನಡೆದಿತ್ತು ಎಂದು ಸುಧಾಕರ್ ಆರೋಪಿಸಿದ್ದಾರೆ. ಆದರೆ, 2019ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ತನಿಖೆ ನಡೆಸಿದ್ದರು. ತನಿಖಾ ವರದಿಯಲ್ಲಿ ಯಾವುದೆ ಅವ್ಯವಹಾರ ಆಗಿಲ್ಲ ಎಂದು ವರದಿ ಸಲ್ಲಿಕೆಯಾಗಿದ್ದು, ಅದನ್ನು ಸರಕಾರ ಅಂಗೀಕರಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿಯ ಆಲಿಬಾಬಾ ಮತ್ತು ಚಾಲಿಸ್ ಚೋರ್‍ಗಳ ದಂಡ ನಾಯಕ ಆಗುವ ಹಠಕ್ಕೆ ಬಿದ್ದ ಸುಧಾಕರ್ ಅವರನ್ನು ಸಿಎಂ ಬೊಮ್ಮಾಯಿ ಬಫೂನ್ ಮಾಡುತ್ತಿದ್ದಾರೆ. ಬೇಕಂತಲೇ ಸುಧಾಕರ್ ಬಾಯಲ್ಲಿ ಸುಳ್ಳು ಹೇಳಿಸುತ್ತಿದ್ದಾರೆ. ಆರೆಸ್ಸೆಸ್‍ನವರು ಕೊರೋನ ಕಾಲದ ಭ್ರಷ್ಟಾಚಾರಕ್ಕೂ ಬೇಷರತ್ ಬೆಂಬಲ ನೀಡುವ ರೀತಿಯಲ್ಲಿ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡುವುದಕ್ಕೆ ಸುಧಾಕರ್‍ರನ್ನು ಮುಂದೆ ಬಿಟ್ಟಿದ್ದಾರೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!