ಜೆಎನ್ಯು ನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ
ನವದೆಹಲಿ ಜ.25 : ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಬಿಬಿಸಿಯ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕ ಕಡಿತ ಮಾಡುವ ಮೂಲಕ ವಿಶ್ವವಿದ್ಯಾಲಯದ ಆಡಳಿ ಮಂಡಳಿ ತಡೆದಿದೆ ಎಂದು ವರದಿಯಾಗಿದೆ.
ಗುಜರಾತಿನಲ್ಲಿ 2002ರಲ್ಲಿ ನಡೆದಿದ್ದ ಗೋದ್ರಾ ಮತ್ತು ಗೋಧೋತ್ತರ ಹತ್ಯಾ ಕಾಂಡಗಳು ಹಾಗೂ ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಕ್ರಮಗಳ ಕುರಿತು ಬಿಬಿಸಿಯು `ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿ, ಪ್ರಸಾರ ಮಾಡಿದೆ. ಈ ಸಾಕ್ಷ್ಯಚಿತ್ರಕ್ಕೆ ಭಾರತದ ವಿದೇಶಾಂಗ ಸಚಿವಾಲಯವು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಜತೆಗೆ ಈ ಸಾಕ್ಷ್ಯಚಿತ್ರದ ಲಿಂಕ್ಗಳು ಇರುವ ಟ್ವಿಟ್ ಮತ್ತು ವಿಡಿಯೊಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರವು ಟ್ವಿಟರ್ ಮತ್ತು ಯೂಟ್ಯೂಬ್ಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಹಲವು ಸಂಘಟನೆಗಳು ಸಿದ್ಧತೆ ನಡೆಸಿದ್ದವು.
ಜೆಎನ್ಯುನ ವಿದ್ಯಾರ್ಥಿ ಸಂಘಟನೆಯು ಮಂಗಳವಾರ ರಾತ್ರಿ 9ಕ್ಕೆ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಬೇಡಿ, ಪ್ರದರ್ಶಿಸಿದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ವಿದ್ಯಾರ್ಥಿ ಸಂಘಟನೆಗೆ ಜೆ.ಎನ್.ಯು ಆಡಳಿತವು ಎಚ್ಚರಿಕೆ ನೀಡಿತ್ತು. ಅಲ್ಲದೆ ಈ ಚಿತ್ರವನ್ನು ಪ್ರದರ್ಶಿಸದಂತೆ ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕ ಕಡಿತ ಮಾಡುವ ಮೂಲಕ ವಿಶ್ವವಿದ್ಯಾಲಯದ ಆಡಳಿ ಮಂಡಳಿ ತಡೆದಿದೆ ಎಂದು ಮಾಧ್ಯಮದ ವರದಿಯಲ್ಲಿ ತಿಳಿಸಲಾಗಿದೆ.
ಮೂಲಗಳ ಪ್ರಕಾರ ಈ ಸಾಕ್ಷ್ಯಚಿತ್ರದ ಮೊದಲ ಸಂಚಿಕೆಯನ್ನು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಟನೆಯೊಂದು ಪ್ರದರ್ಶಿಸಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳಲ್ಲಿ ಒಂದಾದ ‘ಪ್ರಟರ್ನಿಟಿ ಮೂವ್ಮೆಂಟ್, ವಿಶ್ವವಿದ್ಯಾಲಯದ ವಾಣಿಜ್ಯ ಸಂಕೀರ್ಣದ ಬಳಿಯಲ್ಲಿ ಶನಿವಾರ ಸಂಜೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದೆ. ಈ ಬಗ್ಗೆ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (ಎಬಿವಿಪಿ) ಸದಸ್ಯರು ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ಗೆ ಮಂಗಳವಾರ ದೂರು ನೀಡಿದ್ದರು.
ಬಳಿಕ ಅನುಮತಿ ಪಡೆಯದೇ ಸಾಕ್ಷ್ಯಚಿತ್ರ ಪ್ರದರ್ಶಿಸಿದ ಕುರಿತು ವಿಶ್ವವಿದ್ಯಾಲಯವು ಅಂತರಿಕ ವಿಚಾರಣೆ ಆರಂಭಿಸಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೈದರಾಬಾದ್ ವಿವಿ, ಈ ಸಾಕ್ಷ್ಯಚಿತ್ರವನ್ನು ನಿಷೇಧ ಮಾಡಿಲ್ಲ ಅಥವಾ ಈ ಸಂಬಂಧ ನಮಗೆ ಯಾವುದೇ ಅಧಿಕೃತ ಸುತ್ತೋಲೆ ಬಂದಿಲ್ಲ. ಪ್ರದರ್ಶನ ಕುರಿತು ವರದಿ ಬಂದ ನಂತರ ಕ್ರಮದ ಬಗ್ಗೆ ಯೋಚಿಸುತ್ತೇವೆ ಎಂದು ಹೇಳಿದೆ.