ಕಪ್ಪು ಪಟ್ಟಿಯಲ್ಲಿರುವ ಕಂಪೆನಿಯಿಂದ 25 ಕೋಟಿ ಮೌಲ್ಯದ ಔಷಧಿ ಖರೀದಿಗೆ ಕಾರ್ಯಾದೇಶ

ಬೆಂಗಳೂರು ಜ.25 : ಕಳಪೆ ಗುಣಮಟ್ಟ ಹಾಗೂ ಟೆಂಡರ್ ಷರತ್ತಿನಂತೆ ಔಷಧ ಪೂರೈಸದ ಕಾರಣಕ್ಕಾಗಿ ವಿವಿಧ ರಾಜ್ಯಗಳಲ್ಲಿ ಕಪ್ಪು ಪಟ್ಟಿಯಲ್ಲಿರುವ ಕಂಪನಿಯೊಂದರಿಂದ 25 ಕೋಟಿ ಮೌಲ್ಯದ ಔಷಧಿ ಖರೀದಿಗೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ಕಾರ್ಯಾದೇಶ ನೀಡಿದೆ ಎಂದು ವರದಿಯಾಗಿದೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳು, ಚಿಕಿತ್ಸಾಲಯಗಳಿಗೆ ಪೂರೈಸಲು 45 ಕೋಟಿ ಮೌಲ್ಯದ ಔಷಧಿ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಗೆ 2022ರಲ್ಲಿ ನಿಗಮವು ಟೆಂಡರ್ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ವಿವಿಧ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳು ಕಪ್ಪು ಪಟ್ಟಿಗೆ ಸೇರಿಸಿರುವ ಕಂಪೆನಿಗಳಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಮನ್ನಣೆ ನೀಡುತ್ತಿರುವ ಕುರಿತು ಮುಖ್ಯಮಂತ್ರಿಯವರಿಗೆ ದೂರು ಸಲ್ಲಿಕೆಯಾದ ಕಾರಣದಿಂದ ಜೂನ್ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆಯನ್ನೇ ತಡೆಹಿಡಿಯಲಾಗಿತ್ತು. ಇದೀಗ ಆರು ತಿಂಗಳ ಹಿಂದೆ ತಡೆಹಿಡಿದಿದ್ದ ಟೆಂಡರ್ ಪ್ರಕ್ರಿಯೆಯೊಂದನ್ನು ಡಿಸೆಂಬರ್‍ನಲ್ಲಿ ಅಂತಿಮಗೊಳಿಸಿರುವ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ಡಿಸೆಂಬರ್ ಮೊದಲ ವಾರ ಕಾರ್ಯಾದೇಶ ವಿತರಿಸಿದೆ. ಅದರಂತೆ ಛತ್ತೀಸಗಢ, ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಪ್ಪುಪಟ್ಟಿ ಸೇರಿದ್ದ ಯುವಿಕ್ಯೂರ್ ಇಂಡಿಯಾ ಲಿಮಿಟೆಡ್ ಎಂಬ ಕಂಪೆನಿಗೆ ರೂ. 25.15 ಕೋಟಿ ಮೌಲ್ಯದ 30 ಔಷಧಿಗಳ ಪೂರೈಕೆಗೆ 2022ರ ಡಿಸೆಂಬರ್ 6ರಂದು ಕಾರ್ಯಾದೇಶ ನೀಡಲಾಗಿದೆ. ಇದೇ ಕಂಪೆನಿಯನ್ನು ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‍ಐಸಿ) ಕೂಡ ಅಕ್ಟೋಬರ್ 25ರಂದು ಎರಡು ವರ್ಷಗಳ ಅವಧಿಗೆ ಕಪ್ಪು ಪಟ್ಟಿಗೆ ಸೇರಿಸಿತ್ತು. ದೆಹಲಿ ಹೈಕೋರ್ಟ್‍ನ ಮಧ್ಯಂತರ ಆದೇಶದ ಆಧಾರದಲ್ಲಿ ತಾತ್ಕಾಲಿಕವಾಗಿ ತಡೆಹಿಡಿದಿದೆ. ರಾಜಸ್ಥಾನದಲ್ಲಿ ಈ ವರ್ಷದ ಸೆಪ್ಟೆಂಬರ್‍ವರೆಗೆ ಮತ್ತು ಕೇರಳದಲ್ಲಿ ಈ ವರ್ಷದ ಏಪ್ರಿಲ್‍ವರೆಗೂ ಇದೇ ಕಂಪನಿಯನ್ನು ಕಪ್ಪುಪಟ್ಟಿಯಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಔಷಧಿ ಖರೀದಿ ವಿಭಾಗದ ನಿರ್ದೇಶಕ ಡಾ. ರಘುನಂದನ್ ಅವರು, `ಯುನಿಕ್ಯೂರ್ ಇಂಡಿಯಾ ಲಿಮಿಟೆಡ್ ಕಂಪನಿಯನ್ನು ಹಲವು ರಾಜ್ಯಗಳಲ್ಲಿ ಕಪ್ಪು ಪಟ್ಟಿಗೆ ಸೇರಿಸಿರುವುದು ನಿಜ. ಆದರೆ, ಕೆಲವು ರಾಜ್ಯಗಳ ತೀರ್ಮಾನಕ್ಕೆ ಹೈಕೋರ್ಟ್‍ಗಳಿಂದ ತಡೆಯಾಜ್ಞೆ ದೊರಕಿದೆ. ಬಳಿಕ ಅದೇ ರಾಜ್ಯ ಸರ್ಕಾರಗಳು ಈ ಕಂಪೆನಿಯಿಂದ ಔಷಧಿ ಖರೀದಿಸುತ್ತಿವೆ. ಈ ಎಲ್ಲಾ ಅಂಶಗಳನ್ನೂ ಪರಿಶೀಲಿಸಿ ಔಷಧಿ ಖರೀದಿಗೆ ಕಾರ್ಯಾದೇಶ ನೀಡಲಾಗಿದೆ’ ಎಂದು ತಿಳಿಸಿದ್ದಾರೆ

‘ಯಾವುದೇ ಕಂಪನಿ ಕಪ್ಪು ಪಟ್ಟಿಗೆ ಸೇರಿಸಿರುವುದನ್ನು ಪ್ರಶ್ನಿಸಿರುವ ಅರ್ಜಿಗಳು ನ್ಯಾಯಾಲಯಗಳಲ್ಲಿ ಬಾಕಿ ಇದ್ದರೂ ಅಂತಹ ಸಂಸ್ಥೆಯನ್ನು ಟೆಂಡರ್ ಪ್ರಕ್ರಿಯೆಯಲ್ಲಿ ಪರಿಗಣಿಸುವುದಿಲ್ಲ’ ಎಂದು ಕೆಎಸ್‍ಎಂಎಸ್‍ಸಿಎಲ್ ಟೆಂಡರ್ ಷರತ್ತಿನಲ್ಲಿ ಪ್ರಕಟಿಸಿತ್ತು. ಈ ನಡುವೆ ಛತ್ತೀಸಗಢ ರಾಜ್ಯ ಸರ್ಕಾರ, ಇಎಸ್‍ಐಸಿ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಕಪ್ಪು ಪಟ್ಟಿಗೆ ಸೇರಿಸಿರುವುದನ್ನು ಪ್ರಶ್ನಿಸಿ ಯುನಿಕ್ಯೂರ್ ಸಲ್ಲಿಸಿರುವ ಅರ್ಜಿಗಳು ಹೈಕೋರ್ಟ್‍ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಈ ಬಗ್ಗೆ ಕೆಲವೆಡೆ ಮಧ್ಯಂತರ ತಡೆಯಾಜ್ಞೆ ಮಾತ್ರ ದೊರಕಿದೆ. ಆದ್ದರಿಂದ ಕಪ್ಪು ಪಟ್ಟಿ ಸೇರಿಸುವ ಆದೇಶಗಳಿಗೆ ಕೆಲವೆಡೆ ನ್ಯಾಯಾಲಯಗಳಿಂದ ತಡೆಯಾಜ್ಞೆ ದೊರಕಿರುವುದನ್ನು ಆಧರಿಸಿ ಔಷಧಿ ಖರೀದಿಗೆ ಕಾರ್ಯಾದೇಶ ನೀಡುವಂತೆ ಕಂಪೆನಿ ನ.25ರಂದು ನಿಗಮಕ್ಕೆ ಮನವಿ ಸಲ್ಲಿಸಿತ್ತು. ಅದನ್ನು ಆಧರಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾರ್ಯಾದೇಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!