ನಾಲಗೆ ಹರಿಯಬಿಟ್ಟು ಮಾತನಾಡಿದರೆ ಕತ್ತರಿಸಬೇಕಾಗುತ್ತದೆ: ಯತ್ನಾಳ್ ಗೆ ಸಚಿವ ನಿರಾಣಿ ಎಚ್ಚರಿಕೆ
ಬೆಂಗಳೂರು, ಜ.14: ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಮೇಲೆ ಆ ಪಕ್ಷದ ಶಿಸ್ತು ಚೌಕಟ್ಟಿಗೆ ಬದ್ದರಾಗಿರಬೇಕು. “ನಾಲಗೆ ಹರಿಯಬಿಟ್ಟು ಮಾತನಾಡಿದರೆ ನಾಲಗೆ ಕತ್ತರಿಸುವ ಕೆಲಸ ಮಾಡಬೇಕಾಗುತ್ತದೆ. ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯಪುರದವರು ಒಬ್ಬರಿದ್ದಾರೆ. ಅವರು ಎಲುಬಿಲ್ಲದ ನಾಲಿಗೆ ಇಲ್ಲದೆ ಮಾತನಾಡುತ್ತಿದ್ದಾರೆ. ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡುವುದಿಲ್ಲ. ಪದೇ ಪದೇ ಒಬ್ಬರನ್ನು ಹೀಯಾಳಿಸಿ ಮಾತನಾಡುವುದು, ಬಾಯಿಗೆ ಬಂದಂತೆ ಟೀಕೆ ಮಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರೆ ಒಳ್ಳೆಯದು. ನಾಲಿಗೆ ಉದ್ದ ಇದೆ ಎಂದು ಚಾಚಿದರೆ ಕತ್ತರಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಾಗೂ ಬಿಜೆಪಿಗೆ ಬಂದ ಮೇಲೆ ಮುಸ್ಲಿಮರ ವಿರುದ್ಧ ಮಾತನಾಡುವುದು, ಹಿಂದುತ್ವದ ಬಗ್ಗೆ ಮಾತನಾಡುವುದು ಅವರಿಗೆ ಚಾಳಿಯಾಗಿಬಿಟ್ಟಿದೆ. ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಮೇಲೆ ಆ ಪಕ್ಷದ ಶಿಸ್ತು ಚೌಕಟ್ಟಿಗೆ ಬದ್ದರಾಗಿರಬೇಕು. ಪಿಂಪ್ ಬಗ್ಗೆ ಮಾತನಾಡುವ ಕೆಲಸ ಮಾಡಿದ್ದಾರೆ. ಆ ಸಂಸ್ಕೃತಿಯಲ್ಲಿ ಇದ್ದವರೇ ಈ ರೀತಿ ಮಾತನಾಡುವುದು. ಒಳ್ಳೆಯ ಕುಟುಂಬದ ಹಿನ್ನಲೆ, ಸಂಸ್ಕಾರದಿಂದ ಬಂದವರು ಈ ರೀತಿ ಮಾತನಾಡುವುದಿಲ್ಲ ಎಂದು ಟೀಕಿಸಿದ್ದಾರೆ
ನಾವು ಪಕ್ಷದ ನಿಯಮವನ್ನು ಮೀರಿ ಮಾತನಾಡಬಾರದು. ಪಕ್ಷ ತಾಯಿ ಸಮಾನ. ಎಷ್ಟೇ ಅಸಮಾಧಾನವಿದ್ದರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಒಂದು ವೇಳೆ ಪಕ್ಷದಲ್ಲಿರಲು ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಹೊರಗೆಹೋಗಿ ಪ್ರತಿಭಟನೆ ಮಾಡಲಿ ಎಂದು ಸವಾಲು ಹಾಕಿದರು. ಇದೇ ವೇಳೆ ರಾಜಕೀಯದಲ್ಲಿ ಇವೆಲ್ಲ ಬಹಳ ದಿನ ನಡೆಯುವುದಿಲ್ಲ. ಈ ದೊಂಬರಾಟಕ್ಕೆ ವಿಜಯಪುರದ ಜನ ಉತ್ತರ ಕೊಡುತ್ತಾರೆ ಎಂದು ಎಚ್ಚರಿಕೆಯನ್ನೂ ನೀಡಿದರು.