ಅದಾನಿ ವಿದ್ಯುತ್ ಸ್ಥಾವರ (ಯುಪಿಸಿಎಲ್) ದಿಂದ ಪೊಳ್ಳು ಭರವಸೆ :ಭೂ ಸಂತ್ರಸ್ಥರ ಅಳಲು
ಉಡುಪಿ: ಜಿಲ್ಲೆಯ ಪಡುಬಿದ್ರೆಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಯುಪಿಸಿಎಲ್ ಅದಾನಿ ಉಷ್ಣ ವಿದ್ಯುತ್ ಸ್ಥಾವರ ಘಟಕದ ವಿಸ್ತರಣೆಗಾಗಿ 5 ವರ್ಷಗಳ ಹಿಂದೆ ಭೂಸ್ವಾಧೀನ ಪ್ರಕ್ರಿಯೆ ವೇಳೆ ಕಂಪೆನಿ ನೀಡಿದ್ದ ಭರವಸೆ ಈ ವರೆಗೂ ಈಡೆರಿಸಿಲ್ಲ ಎಂದು ಭೂ ಸಂತ್ರಸ್ಥರು ಆರೋಪ ಮಾಡಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಪತ್ರಿಕಾ ಗೋಷ್ಠಿನಡೆಸಿ ಮಾತನಾಡಿದ ಸಂತ್ರಸ್ಥರು, ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ಕಾರ್ಯಾಚರಿಸುತ್ತಿದ್ದ ಯುಪಿಸಿಎಲ್ ಅದಾನಿ ಉಷ್ಣ ವಿದ್ಯುತ್ ಸ್ಥಾವರ ಘಟಕದ ವಿಸ್ತರಣೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ವೇಳೆ ಕಂಪೆನಿಯು ಭೂಮಿ ಕಳೆದುಕೊಂಡ ಕುಟುಂಬದ ಒಬ್ಬ ಸದಸ್ಯನಿಗೆ ಕಂಪನಿಯಲ್ಲಿ ಉದ್ಯೋಗ ಅಥವಾ ಉದ್ಯೋಗ ಬೇಡವಾದಲ್ಲಿ ಉದ್ಯೋಗ ಪರಿಹಾರ ಧನ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಭೂ ಸ್ವಾದೀನ ಪ್ರಕ್ರಿಯೆ ನಡೆದು ಐದು ವರ್ಷಗಳು ಕಳೆದರೂ ಮನೆ-ಮಠ ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಸಿಗಬೇಕಾದ ಉದ್ಯೋಗವಾಗಲಿ ಅಥವಾ ಉದ್ಯೋಗ ಪರಿಹಾರ ಧನವಾಗಲಿ ಈವರೆಗೂ ಸಿಕ್ಕಿಲ್ಲ ಎಂದು ಘಟಕದ ವಿರುದ್ಧ ಭೂ ಸಂತ್ರಸ್ಥರು ಆರೋಪಿಸಿದ್ದಾರೆ.
ಈ ಪ್ರದೇಶದಲ್ಲಿ ಫಲವತ್ತಾದ ಕೃಷಿ ಭೂಮಿಯಿಂದ ಬರುತ್ತಿದ್ದ ಆದಾಯವನ್ನೇ ನಂಬಿಕೊಂಡಿದ್ದ ನಮಗೆ ಈಗ ಕೃಷಿ ಆದಾಯವೂ ನಿಂತಿದೆ. ಅಲ್ಲದೆ ಕಂಪೆನಿಯಿಂದ ಸಿಗಬೇಕಾದ ಉದ್ಯೋಗವೂ ಸಿಗದೆ ಪರದಾಡುತ್ತಿದ್ದೇವೆ. ಈಗಾಗಲೇ ತಮಗೆ ಸಿಗಬೇಕಾದ ಉದ್ಯೋಗಕ್ಕಾಗಿ ಜಿಲ್ಲಾಧಿಕಾರಿ, ಯುಪಿಸಿಎಲ್ ಕಂಪೆನಿ, ಕೆಐಎಡಿಬಿ ಮತ್ತು ಸ್ಥಳೀಯ ಶಾಸಕರಿಗೆ ಎರಡು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ತಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ಕಂಪೆನಿಯು ಈಗಾಗಲೇ ನೀಡಿರುವ ಭರವಸೆಯಂತೆ ಒಂದು ತಿಂಗಳ ಅವಧಿಯೊಳಗೆ ಉದ್ಯೋಗ ಕೊಡದಿದ್ದಲ್ಲಿ ಇದೇ ತಿಂಗಳ 29 ರಂದು ಯುಪಿಸಿಎಲ್ ಕಂಪೆನಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಸಂತ್ರಸ್ತರು ತಿಳಿಸಿದ್ದಾರೆ. ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಬಾಲಕೃಷ್ಣ, ನಿತೇಶ್, ರೇಷ್ಮಾ, ಕಿರಣ್, ಜಾನೆಟ್ ಮೊದಲಾದವರು ಉಪಸ್ಥಿತರಿದ್ದರು.