ಸರಕಾರಿ ಜಾಹಿರಾತುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ, ಸಿಜೆಐ ಹೊರತು ಪಡಿಸಿ ಯಾರದೇ ಚಿತ್ರ ಬಳಸುವಂತಿಲ್ಲ: ಸುಪ್ರಿಂ ಕೋರ್ಟ್

ನವದೆಹಲಿ ಜ.13 : ಸರಕಾರಿ ಜಾಹಿರಾತುಗಳಿಗೆ ಸಂಬಂಧಿಸಿ ಜಾಹೀರಾತುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ, ಸಿಜೆಐ ಹೊರತುಪಡಿಸಿದಂತೆ ಯಾರದೇ ಚಿತ್ರಗಳನ್ನು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಜಾಹೀರಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದ್ದು, ಸರಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿಗಳು, ಪದಾಧಿಕಾರಿಗಳು, ರಾಜ್ಯಪಾಲರು, ಅಧಿಕಾರಿಗಳ ಭಾವಚಿತ್ರಗಳು ಪ್ರಕಟವಾಗುವಂತಿಲ್ಲ. ಜತೆಗೆ ಪಕ್ಷದ ಚಿಹ್ನೆಗಳು, ಧ್ವಜಗಳೂ ಕೂಡ ಈ ಜಾಹಿರಾತುಗಳಲ್ಲಿ ಮುದ್ರಿತವಾಗುವಂತಿಲ್ಲ. ರಾಷ್ಟ್ರಪತಿ, ಪ್ರಧಾನಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅವರ ಭಾವಚಿತ್ರಗಳನ್ನು, ಅವರ ಪೂರ್ವಾನುಪತಿ ಪಡೆದು ಪ್ರಕಟಿಸಬಹುದಾಗಿದೆ. ಹಾಗೂ ರಾಷ್ಟ್ರಪಿತ ಮಹಾತ್ಮಗಾಂಧಿಯಂತಹ ಮುಖಂಡರ ಚಿತ್ರಗಳನ್ನು ಬಳಸಬಹುದಾಗಿದೆ ಎಂದು ಹೇಳಿದೆ.

ಕೆಲವು ಸಂದರ್ಭಗಳಲ್ಲಿ ಉದಾಹರಣೆಗೆ ಪಟ್ನಾ ಹೈಕೋರ್ಟ್‍ನ ಶತಮಾನೋತ್ಸವದ ಸಂದರ್ಭದಲ್ಲಿ ನೀಡುವ ಜಾಹೀರಾತಿನಿಂದ ಯಾವುದೇ ಜನರಿಗೆ ಪ್ರಯೋಜನವಿಲ್ಲ ಹಾಗಾಗಿ ಇಂಥವುಗಳನ್ನು ಕೈಬಿಡಬೇಕು ,ಇಂಥಹ ಪ್ರಕ್ರಿಯೆಯಿಂದ ದೂರ ಇರಬೇಕು ಎಂದು ಸಲಹೆ ನೀಡಿದೆ.

ನೀತಿ ನಿರೂಪಣಾ ನಿರ್ಧಾರಗಳಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡಬಾರದು ಎಂದು ಭಾರತ ಸರಕಾರದ ಪರವಾಗಿ ಅಟಾರ್ನಿ ಜನರಲ್ ಅವರ ವಾದವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್, ಯಾವುದೇ ನೀತಿ ಅಥವಾ ಕಾನೂನು ಇಲ್ಲದ ಸಂದರ್ಭದಲ್ಲಿ ನ್ಯಾಯಾಲಯದಗಳು ಮಧ್ಯಪ್ರವೇಶಿಸಬಹುದು ಎಂದು ಸ್ಪಷ್ಟಪಡಿಸಿದೆ. ಹಾಗೂ ದೇಶದ ಯಾವನೊಬ್ಬ ಪ್ರಜೆಯೂ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಬಹುದು ಎಂದು ಕೋರ್ಟು ತಿಳಿಸಿದೆ. ಹಾಗೂ ಸರಕಾರಿ ಜಾಹೀರಾತಿನ ಬಗ್ಗೆ ಸಂಸತ್ತಿನಲ್ಲಿ ಈ ಸಂಬಂಧ ಪ್ರತ್ಯೇಕ ಕಾನೂನು ಅಥವಾ ನೀತಿ ರೂಪುಗೊಳ್ಳಬೇಕು. ಅಲ್ಲಿವರೆಗೆ ಈ ತೀರ್ಪು ಅನ್ವಯವಾಗಲಿದೆ ಎಂದು ಕೋರ್ಟ್ ತಿಳಿಸಿದೆ.

”ಸರಕಾರಿ ಜಾಹೀರಾತು ಎಲ್ಲ ಮಾಧ್ಯಮಗಳಿಗೂ ಸಮಾನವಾಗಿ ಹಂಚಿಕೆಯಾಗಬೇಕು, ಹಂಚಿಕೆಗೆ ಪ್ರಸರಣ ಸಂಖ್ಯೆ ಮಾನದಂಡವಾಗಬೇಕು,” ಎಂದು ಹೇಳಿರುವ ಸುಪ್ರೀಂ ಕೋರ್ಟ್, ”ಸರಕಾರಗಳು ಕೆಲವೇ ಕೆಲವು ಆಯ್ದ ಮಾಧ್ಯಮಗಳಿಗೆ ಜಾಹೀರಾತು ನೀಡುವುದನ್ನು ನಿಲ್ಲಿಸಬೇಕು. ಜಾಹೀರಾತುಗಳಿಂದ ಸಹಜವಾಗಿಯೇ ಆದಾಯ ಬರುತ್ತದೆ. ಇದು ಆನುಷಂಗಿಕವಾಗಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ,” ಎಂದು ತಿಳಿಸಿದೆ. ಹಾಗೂ ಯಾವ ಮಾಧ್ಯಮ ಸಮೂಹಕ್ಕೆ ಎಷ್ಟು ಜಾಹೀರಾತು ನೀಡಲಾಗಿದೆ ಎಂಬುದರ ಬಗ್ಗೆ ವಿಶೇಷ ಆಡಿಟ್ ನಡೆಸಲು ನಿರಾಕರಿಸಿದೆ. ಅಲ್ಲದೆ “ಅದಕ್ಕಾಗಿ ವಿಶೇಷ ಆಡಿಟ್ ನಡೆಸಬೇಕಾದ ಅಗತ್ಯವಿಲ್ಲ. ಜನರ ಹಣದ ಬಳಕೆಯ ಬಗೆಗಿನ ಉತ್ತರದಾಯಿತ್ವವನ್ನು ನಿಗದಿ ಪಡಿಸಲು ಸಾಕಷ್ಟು ವ್ಯವಸ್ಥೆಗಳಿವೆ,” ಅದನ್ನು ಸಾರ್ವಜನಿಕರು ಬಳಸಿಕೊಳ್ಳಲಿ ಎಂದು ಹೇಳಿದೆ.

ಹಾಗೂ‘‘ಆಡಳಿತದ ಚುಕ್ಕಾಣಿ ಹಿಡಿದು ಇಂತಿಷ್ಟು ದಿನ, ತಿಂಗಳು ಅಥವಾ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರದ ಸಾಧನೆಗಳನ್ನು ಬಿಂಬಿಸುವ ಜಾಹೀರಾತುಗಳನ್ನು ನೀಡಲಾಗುತ್ತದೆ. ಇವು ಜನರಿಗೆ ಸರಕಾರದ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡುವುದರಿಂದ ಇವುಗಳಿಗೆ ಪರವಾನಗಿ ನೀಡಬಹುದಾಗಿದೆ’’ ಎಂದು ಹೇಳಿದೆ.

ಉತ್ತರ ಪ್ರದೇಶ ಸರಕಾರ ಕೆಲವು ಸರಣಿ ಜಾಹೀರಾತುಗಳನ್ನು ಬಿಡುಗಡೆ ಮಾಡಿತ್ತು. ಇವುಗಳಲ್ಲಿ ಅಪರಾಧ ನಿಯಂತ್ರಣಕ್ಕಾಗಿ ತಮಗೆ ಇನ್ನೊವಾ ಕಾರುಗಳು ಮತ್ತು ಹೊಸ ಬೈಕ್‍ಗಳನ್ನು ನೀಡಿದ ಬಗ್ಗೆ ವಿವರಣೆ ನೀಡಿದ್ದರು. ಕಡೆಗೆ ಅದಕ್ಕೆ ಮುಖ್ಯಮಂತ್ರಿಗಳು ಅವರಿಗೆ ಧನ್ಯವಾದ ಹೇಳಿದ್ದರು. ರಾಜ್ಯದಲ್ಲಿನ ಅಪರಾಧ ನಿಯಂತ್ರಣ ಮುಖ್ಯಮಂತ್ರಿಗಳ ಹೊಣೆಯೇ ಅಲ್ಲವೇನೋ ಎಂಬಂತಿತ್ತು. ಇಂಥ ಜಾಹೀರಾತುಗಳು ಉತ್ತರ ಪ್ರದೇಶಕ್ಕಷ್ಟೇ ಸೀಮಿತವಲ್ಲ. ದೇಶದ ಎಲ್ಲಾ ಕಡೆ ಇಂತಹ ಛೀಪ್ ಪಬ್ಲಿಸಿಟಿ ಕಾಣಸಿಗುತ್ತದೆ. ಈ ಬಗ್ಗೆಯೂ ಅಡಳಿತ ವರ್ಗ ಗಮನಹರಿಸಬೇಕು ಎಂದು ಸೂಚನೆ ನೀಡಿದೆ.

ಇನ್ನು ಸರಕಾರಿ ಜಾಹಿರಾತು ನಿಯಂತ್ರಣಕ್ಕಾಗಿ ಸುಪ್ರೀಂ ಕೋರ್ಟ್ ರಚಿಸಿದ್ದ ಸಮಿತಿಯ ನೇತೃತ್ವವನ್ನು ಪ್ರೊ.ಎನ್.ಆರ್. ಮಾಧವ ಮೆನನ್ ವಹಿಸಿದ್ದರು. ಟಿ.ಕೆ. ವಿಶ್ವನಾಥನ್ ಮತ್ತು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ವಹಿಸಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!