ಹಿಜಾಬ್ ವಿವಾದ : ಸರಕಾರದ ಪರ ವಾದಿಸಿದ್ದ ವಕೀಲರಿಗೆ 88 ಲಕ್ಷ ರೂ. ಸಂಭಾವನೆ?

ಕಡತ ಚಿತ್ರ

ಬೆಂಗಳೂರು ಜ.11 : ಶಿಕ್ಷಣ ಇಲಾಖೆಯು ಹಿಜಾಬ್ ಧರಿಸುವ ವಿಷಯದಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ಮತ್ತು ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಇವರಿಗೆ 88.00 ಲಕ್ಷ ರೂ. ಸಂಭಾವನೆ ನೀಡಲು ಪ್ರಸ್ತಾವನೆ ಸಲ್ಲಿಸಿದೆ ಎಂಬ ಸುದ್ದಿ ವರದಿಯಾಗಿದೆ.

ಮಾಧ್ಯಮ ವರದಿ ಪ್ರಕಾರ,” ಈ ಪ್ರಕರಣದಲ್ಲಿ ರಾಜ್ಯ ಸರಕಾರದ ಪರವಾಗಿ ವಕಾಲತ್ತು ವಹಿಸಿದ್ದ ತುಷಾರ್ ಮೆಹ್ತಾ (ಸಾಲಿಸಿಟರ್ ಜನರಲ್ ಅಫ್ ಇಂಡಿಯಾ) ಅವರಿಗೆ ಒಂದು ದಿನದ ಹಾಜರಾತಿಗೆ 4,40,000 ರೂ.ನಂತೆ ಒಟ್ಟು 9 ದಿನಗಳಿಗೆ (2022ರ ಆಗಸ್ಟ್ 29ರಿಂದ ಸೆ.22ರ ವರೆಗೆ) 39,60,000 ರೂ. ಮತ್ತು ಕೆ.ಎಂ. ನಟರಾಜ್ (ಅಡಿಷನಲ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ) ಇವರಿಗೆ ಪ್ರತೀ ದಿನದ ಹಾಜರಾತಿಗೆ 4,40,000 ರೂ.ನಂತೆ ಒಟ್ಟು 11 ದಿನಗಳಿಗೆ (2022ರ ಅಗಸ್ಟ್ 29ರಿಂದ ಸೆ.22ರವರೆಗೆ) ಒಟ್ಟು 48,40,000 ರೂ. ನಿಗದಿಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.

ಕರಾವಳಿ ಜಿಲ್ಲೆಗಳಲ್ಲಿ ಆರಂಭವಾಗಿದ್ದ ಹಿಜಾಬ್-ಕೇಸರಿ ಶಾಲು ವಿವಾದವು ರಾಜ್ಯವ್ಯಾಪಿ ಹರಡಿತ್ತು. ಹಾಗೆಯೇ ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಪ್ರವೇಶ ದ್ವಾರದಲ್ಲೇ ತಡೆದಿದ್ದ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಪ್ರವೇಶ ನಿರಾಕರಿಸಿದ್ದರು. ಈ ಸಂಬಂಧ ಕುಂದಾಪುರ ಮೂಲದ ಫಾತಿಮಾ ಬುಶ್ರಾ ಎಂಬವರು ಸುಪ್ರೀಂ ಕೋರ್ಟ್ (ರಿಟ್ ಅರ್ಜಿ (ಸಿ) ಸಂಖ್ಯೆ; 95/2022) ಮೆಟ್ಟಿಲೇರಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಎಲ್ಲ ಸರಕಾರಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆ ಮೂಲಕ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವುದಕ್ಕೆ ನಿಬರ್ಂಧ ವಿಧಿಸಿತ್ತು. ಖಾಸಗಿ ಕಾಲೇಜುಗಳಲ್ಲಿ ಕೂಡ ಆಯಾ ಆಡಳಿತ ಮಂಡಳಿ ನಿರ್ಧರಿಸುವ ಸಮವಸ್ತ್ರವನ್ನೇ ವಿದ್ಯಾರ್ಥಿಗಳು ಧರಿಸಬೇಕು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

Leave a Reply

Your email address will not be published. Required fields are marked *

error: Content is protected !!