ಲಂಕಾದಲ್ಲಿ ನಾಲ್ವರು ಭಾರತೀಯ ಮೀನುಗಾರರ ಮೃತದೇಹ ಪತ್ತೆ
ತಿರುಚ್ಚಿ: ಶ್ರೀಲಂಕಾದ ಕಡಲ ಕಿನಾರೆಯಲ್ಲಿ ಭಾರತೀಯ ಮೂಲದ ನಾಲ್ವರು ಮೀನುಗಾರರ ಮೃತದೇಹ ಪತ್ತೆಯಾಗಿದೆ. ಮೃತದೇಹಗಳು ಕಳೆದ ಸೋಮವಾರ ತಮಿಳುನಾಡಿನ ಪುದುಕೊಟ್ಟಿ ಜಿಲ್ಲೆಯ ಕೊತ್ತಿಯಾಪಟ್ಟಣಂ ಜೆಟ್ಟಿಯಿಂದ ಮೀನುಗಾರಿಕೆಗೆ ತೆರಳಿ ನಪತ್ತೆಯಾಗಿದ್ದ ನಾಲ್ವರು ಮೀನುಗಾರದ್ದು ಎಂದು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಮಾಹಿತಿ ನೀಡಿದೆ
ಮೃತ ಮೀನುಗಾರರನ್ನು ಮನಾಥಪುರಂ ಜಿಲ್ಲೆಯ ಎ.ಮೆಸಿಯಾ, ವಿ.ನಾಗರಾಜ್, ಎಸ್.ಸೆಂಥಿಲ್ ಕುಮಾರ್ ಮತ್ತು ಎನ್.ಸ್ಯಾಮ್ಸನ್ ಡಾರ್ವಿನ್ ಎಂದು ಗುರುತಿಸಲಾಗಿದೆ.
ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಜ.21 ರಂದು ಭಾರತೀಯ ಹೈಕಮಿಷನ್‌ಗೆ ಮಾಹಿತಿ ನೀಡಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ ಎಂಬ ಮಾಹಿತಿ ನೀಡಿದೆ. ಆದರೆ ಮೀನುಗಾರರು ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ನಡುವೆ ಈ ಮೀನುಗಾರರು ಸಮುದ್ರ ಮಧ್ಯದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಶ್ರೀಲಂಕಾ ಸೇನೆ ದಾಳಿ ಮಾಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಸಂತ್ರಸ್ತರನ್ನು ಕರೆತರುವ ದೋಣಿಯ ಜತೆಗೆ ಆಗಮಿಸಲು ಮುಂದಾಗಿರುವ ಮೀನುಗಾರರ ಗುಂಪು ಆರೋಪಿಸಿದೆ.
ಮೀನುಗಾರರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಆಗ್ರಹಿಸಿದ್ದು, ಈ ಕುರಿತಂತೆ ಶ್ರೀಲಂಕಾ ಜತೆ ಈ ವಿಷಯವನ್ನು ಚರ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.