ದಿವ್ಯಾ ಹಾಗರಿಗಿಗೆ ಜಾಮೀನು- ಪಟಾಕಿ ಹಚ್ಚಿ ಸಂಭ್ರಮಿಸಿ, ಸ್ವಾಗತ- ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು, ಜ.9: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 9 ತಿಂಗಳಿನಿಂದ ಜೈಲಿನಲ್ಲಿದ್ದ ದಿವ್ಯಾ ಹಾಗರಿಗಿಯನ್ನು ಪಟಾಕಿ ಹಚ್ಚಿ ಸಂಭ್ರಮಿಸಿ, ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಭ್ರಷ್ಟ ಬಿಜೆಪಿ ಸರಕಾರದ ಆಡಳಿತದ ವಿಪರ್ಯಾಸ ಇದು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ 56ಸಾವಿರ ಪಿಎಸ್ಸೈ ಅಭ್ಯರ್ಥಿಗಳು ಭವಿಷ್ಯದ ದಿಕ್ಕು ಕಾಣದೆ ನೋವು ಅನುಭವಿಸುತ್ತಿದ್ದಾರೆ. ಅಕ್ರಮ ನಡೆಸಿದ ಆರೋಪಿಗಳು ಸರಕಾರದ ಸಹಕಾರದಿಂದ ಜಾಮೀನು ಪಡೆದು, ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ಈ ಮೂಲಕ 56 ಸಾವಿರ ಯುವಕರನ್ನು ಅಣಕಿಸುತ್ತಿದೆ ಸರಕಾರ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಹಾಗೂ ‘ಸರಕಾರದ ಸಹಕಾರ, ಗೃಹ ಸಚಿವರ ಮುತುವರ್ಜಿಯಿಂದ ಜಾಮೀನು ಪಡೆದು ಹೊರಬಂದ ಪಿಎಸ್ಸೈ ಅಕ್ರಮದ ಆರೋಪಿ, ಬಿಜೆಪಿ ನಾಯಕಿ ದಿವ್ಯ ಹಾಗರಗಿಯನ್ನು ಪಟಾಕಿ ಹಚ್ಚಿ ಸಂಭ್ರಮಿಸಿ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು. ಯಾಕೆ ಈ ಸಂಭ್ರಮ?, 56 ಸಾವಿರ ಯುವಕರ ಬದುಕು ಮುಳುಗಿಸಿದ್ದಕ್ಕಾ?, ಸರಕಾರದ ಕಿಂಗ್ ಪಿನ್ಗಳನ್ನು ಬಚಾವು ಮಾಡಿದ್ದಕ್ಕಾ?’ ಎಂದು ಪ್ರಶ್ನಿಸಿದೆ.