ಹಾವೇರಿಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯ 130 ಎಕರೆ ವಿಸ್ತೀರ್ಣ ಜಾಗದಲ್ಲಿ ಕನಕ-ಶರೀಫ-ಸರ್ವಜ್ಞ ವೇದಿಕೆ ಮುಂಭಾಗ ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣ ನೆರವೇರಿತು. ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಸಾಹಿತ್ಯ ಪರಿಷತ್ತಿನ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಮಹೇಶ್ ಜೋಶಿ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಬಿ.ಹೀರೇಮಠ ನಾಡ ಧ್ವಜದ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮಾತನಾಡಿದ ಸಚಿವ ಶಿವರಾಮ್ ಹೆಬ್ಬಾರ್ ಅವರು, ‘ನ ಭೂತೋ, ನ ಭವಿಷ್ಯತಿ ಎನ್ನುವ ರೀತಿಯಲ್ಲಿ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡಿಗರು ಮತ್ತು ಸಾಹಿತ್ಯಾಸಕ್ತರ ನೆನಪಿನಲ್ಲಿ ಉಳಿಯುವಂತೆ ಆಯೋಜಿಸಲಾಗಿದೆ. ಕನ್ನಡಿಗರ ಬಗ್ಗೆ, ಭಾಷೆ, ನಾಡು-ನುಡಿಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವವರಿಗೆ ತಕ್ಕ ಉತ್ತರ ನೀಡಲಾಗುವುದು. ನಾಡು ನುಡಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ’ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಮಾತನಾಡಿ, ಹಾವೇರಿಗೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಜಿಲ್ಲಾಡಳಿತ ವತಿಯಿಂದ ಅದ್ದೂರಿ ಸ್ವಾಗತ ನೀಡಲಾಗಿದೆ. ಸಮ್ಮೇಳನ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ನಡೆಯಲಿ ಎಂದು ನಿಗದಿತ ಸಮಯಕ್ಕೆ ಧ್ವಜಾರೋಹಣ ಮಾಡಿದ್ದೇವೆ. ಕನ್ನಡ ನಾಡು ನುಡಿ ಭಾಷೆ ಬಗ್ಗೆ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಉತ್ತಮ ಚರ್ಚೆ ನಡೆಯಲಿದೆ. ಸಮ್ಮೇಳನದಲ್ಲಿ ಯಾವುದೇ ಅಭಾಸ, ಕುಂದುಕೊರತೆಯಾಗದಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಎಚ್ಚರಿಕೆಯಿಂದ ಕೆಲಸ ಮಾಡಿದೆ. ಕನ್ನಡವೇ ಸತ್ಯ-ಕನ್ನಡವೇ ನಿತ್ಯ ಎಂಬ ಘೋಷಣೆಯನ್ನು ಜಾರಿಗೆ ತರಲು ಸರ್ಕಾರ ಸರ್ವರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು. ನಾಡು ನುಡಿಯ ವಿಚಾರದಲ್ಲಿ ಭಿನ್ನತೆ ಮರೆತು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ಸಮ್ಮೇಳನದ ಪ್ರಯುಕ್ತ ನಡೆದ ಸಾಹಿತ್ಯ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು. ಅಪಾರ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!