ಶಿವಮೊಗ್ಗ; ಹುಣಸೋಡು ದುರಂತ ಮೂವರು ಪೊಲೀಸ್ ರ ವಶಕ್ಕೆ
ಶಿವಮೊಗ್ಗ: ಜಿಲ್ಲೆಯ ಹುಣಸೋಡು ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಪೋಟ ಸಂಭವಿಸಿದ ಕಲ್ಲು ಗಣಿಗಾರಿಕೆ ಜಮೀನು ಮಾಲೀಕ ಅವಿನಾಶ್ ಕುಲಕರ್ಣಿ, ಗುತ್ತಿಗೆದಾರ ಸುಧಾಕರ್ ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಜಿಲೆಟಿನ್ ಪೂರೈಕೆ ಮಾಡುತ್ತಿದ್ದ ನರಸಿಂಹ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಲನಾಗೂರಿನಲ್ಲಿರುವ ಬಿವಿಎಸ್ ಸ್ಟೋನ್ ಕ್ರಷರ್ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬಂಧಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರದೇಶದ ಸುರಕ್ಷಿತ ವಲಯದ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ನಡೆಸುವುದಿಲ್ಲ ಎಂಬ ಷರತ್ತಿಗೆ ಒಪ್ಪಿ ಸಹಿ ಹಾಕಿದ ಬಳಿಕ, ಮೂರು ವರ್ಷದ ಅವಧಿಗೆ ಜಿಲ್ಲಾಡಳಿತ ಪರವಾನಿಗೆ ನೀಡಿತ್ತು.
ಆದರೆ, ಆ ಬಳಿಕ ಸ್ಫೋಟಕಗಳ ಬಗ್ಗೆ ಸ್ಥಳೀಯರು ಹತ್ತಾರು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ, ಜಿಲ್ಲಾಡಳಿತ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿ, ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಿನ್ನೆ ರಾತ್ರಿ ಭಾರೀ ಶಬ್ದ ಕೇಳಿದ ಹಿನ್ನೆಲೆ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದರು. ಬಳಿಕ ಅದು ಜಲ್ಲಿ ಕ್ರಷರ್ನಲ್ಲಿ ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡಿರುವುದಾಗಿ ತಿಳಿದು ಬಂದಿತ್ತು.
ಈ ದುರ್ಘಟನೆಯಲ್ಲಿ ಕಾರ್ಮಿಕರು ಮೃತಪಟ್ಟಿದ್ದು, ಸದ್ಯ 7 ಮಂದಿ ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ. ಜಿಲೆಟಿನ್ ತುಂಬಿದ ಲಾರಿ ಸ್ಫೋಟದ ತೀವ್ರತೆಗೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಿಲೋಮೀಟರ್ ದೂರದವರೆಗೂ ಲಾರಿಯ ಬಿಡಿಭಾಗಗಳು ಬಿದ್ದಿವೆ. ಕಾರ್ಮಿಕರ ಮೃತದೇಹ ಛಿದ್ರ ಛಿದ್ರವಾಗಿದ್ದು, ಕ್ರಷರ್ ಸುತ್ತಮುತ್ತ ಇದ್ದ ಬಹುತೇಕ ಮರಗಳು ನಾಶವಾಗಿವೆ. 40 ಕಿಲೋಮೀಟರ್ ದೂರದವರೆಗೂ ಶಬ್ದ ಕೇಳಿ ಬಂದಿದ್ದು, ಸ್ಫೋಟದ ಸ್ಥಳದಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಮುಂಜಾಗೃತಾ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.