ಶಿವಮೊಗ್ಗ: ರೈಲ್ವೇ ಕ್ರಷರ್‌ನಲ್ಲಿ ಭಾರಿ ಸ್ಫೋಟ 15 ಕಾರ್ಮಿಕರ ಸಾವು , ಇನ್ನಷ್ಟು ಸಾವು ಶಂಕೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ರಾತ್ರಿ ನಡೆದ ಭಾರಿ ಸ್ಪೋಟದ ಶಬ್ದ ಭೂಕಂಪದಲ್ಲ ಬದಲಿಗೆ ಹುಣಸೋಡಿನಲ್ಲಿ ರೈಲ್ವೇ ಕ್ರಷರ್‌ನಲ್ಲಿ ಉಂಟಾದ ಭಾರಿ ಸ್ಫೋಟ . ಇದರಲ್ಲಿ ಸುಮಾರು ಕನಿಷ್ಠ 15 ಕಾರ್ಮಿಕರು ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆಗಾಗಿ ಸುಮಾರು 50 ಡೈನಮೈಟ್‌ಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಡೈನಮೈಟ್ ಸಿಡಿದು ಭಾರಿ ಅನಾಹುತ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ಕಾರ್ಮಿಕರ ದೇಹಗಳ ಛಿದ್ರ ಛಿದ್ರವಾಗಿವೆ. ಲಾರಿಯ ತುಂಬಾ ಡೈನಮೈಟ್‌ಗಳನ್ನು ಸಾಗಿಸಲಾಗುತ್ತಿತ್ತು. ಆಗ ಈ ಸ್ಫೋಟ ಸಂಭವಿಸಿದೆ. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಎಲ್ಲ ಕಾರ್ಮಿಕರೂ ಮೃತಪಟ್ಟಿದ್ದಾರೆ. ಅವರೆಲ್ಲರೂ ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಲಾರಿ ಸಂಪೂರ್ಣ ಜನಜ್ಜುಗುಜ್ಜಾಗಿದೆ, ಸ್ಫೋಟದ ತೀವ್ರತೆಗೆ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿದೆ.

ಐದಾರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿದ್ದು, ಘಟನೆಯಲ್ಲಿ ಇನ್ನಷ್ಟು ಜನರು ಮೃತಪಟ್ಟಿರುವ ಅನುಮಾನ ವ್ಯಕ್ತವಾಗಿದೆ. ಕತ್ತಲೆಯಲ್ಲಿ ಮೃತದೇಹಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ.ಹಾಗೆಯೇ ಸ್ಥಳದಲ್ಲಿ ಸ್ಫೋಟಗೊಳ್ಳದ ಜೀವಂತ ಡೈನಾಮೈಟ್‌ಗಳು ಇರುವ ಸಾಧ್ಯತೆ ಇದೆ ಎಂಬ ಭೀತಿ ಕೂಡ ಇದೆ.

ರಾತ್ರಿ 10-20 ರಿಂದ 10-25ರ ವೇಳೆಗೆ ಶಿವಮೊಗ್ಗದಲ್ಲಿ ಭಾರಿ ಸ್ಫೋಟ ಸಂಭವಿಸಿತ್ತು. ಇದು ಭೂಕಂಪ ಎಂದೇ ಹೇಳಲಾಗಿತ್ತು. ಆದರೆ ಇದು ವಾಸ್ತವವಾಗಿ ಅಕ್ರಮ ಕಲ್ಲು ಕ್ವಾರಿಯಲ್ಲಿ ಉಂಟಾದ ಸ್ಫೋಟ ಎಂದು ತಿಳಿದುಬಂದಿದೆ. ಅಕ್ರಮ ಗಣಿಗಾರಿಕೆ ಮಾಡಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸಲ್ಲಿಗೆ ತೆರಳುತ್ತಿದ್ದಾರೆ. ಅವರಿಂದ ಮಾಹಿತಿ ಪಡೆಯುತ್ತೇನೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ.

ಸ್ಫೋಟದ ತೀವ್ರತೆ ಮತ್ತು ಭೂಕಂಪನಕ್ಕೆ ತಮ್ಮ ಮನೆಯಲ್ಲಿಯೂ ಕಿಟಕಿ ಗಾಜುಗಳು ಒಡೆದಿವೆ. ಉಳಿದ ಕಡೆಗಳಲ್ಲಿ ಉಂಟಾದ ಭೂಕಂಪನದ ಅನುಭವಕ್ಕೂ, ಈ ಘಟನೆಗೂ ಸಂಬಂಧವಿದೆಯೇ ಎನ್ನುವುದು ತನಿಖೆ ನಡೆಯಬೇಕಿದೆ ಎಂದಿದ್ದಾರೆ. ಅನಿಲ್ ಎಂಬುವವರ ಒಡೆತನಕ್ಕೆ ಸೇರಿದ ಕ್ರಷರ್‌ನಲ್ಲಿ ಸ್ಫೋಟ ಸಂಭವಿಸಿದೆ.
ಶಿವಮೊಗ್ಗ ಮಾತ್ರವಲ್ಲದೆ, ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿ ಕೂಡ ನೆಲ ಕಂಪಿಸಿದ ಅನುಭವ ಆಗಿತ್ತು. ಹೀಗಾಗಿ ಇಲ್ಲಿನ ಕಂಪನಕ್ಕೂ ಹುಣಸೋಡಿನಲ್ಲಿ ಉಂಟಾದ ಸ್ಫೋಟಕ್ಕೂ ಸಂಬಂಧವಿದೆಯೇ ಎನ್ನುವುದು ಖಾತರಿಯಾಗಿಲ್ಲ.

Leave a Reply

Your email address will not be published. Required fields are marked *

error: Content is protected !!