ನಾನು ಹಿಂದೂ ವಿರೋಧಿಯಲ್ಲ ಹಿಂದುತ್ವದ ವಿರೋಧಿ-ಸಿದ್ದರಾಮಯ್ಯ
ಬೆಂಗಳೂರು, ಜ.6 : ನಾನು ಹಿಂದುತ್ವದ ವಿರೋಧಿಯೇ ಹೊರತು ಹಿಂದೂ ವಿರೋಧಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲಾ ಧರ್ಮಗಳೂ ಸಮಾನವಾಗಿವೆ. ಒಂದು ಧರ್ಮದ ವಿರುದ್ದ ಇನ್ನೊಂದು ಧರ್ಮವನ್ನು ಎತ್ತಿಕಟ್ಟುವುದು ಸರಿಯಲ್ಲ. ಧರ್ಮ, ಜಾತಿಗಳನ್ನು ರಾಜಕೀಯವಾಗಿ ಬಳಸಿಕೊಂಡು ಮನಸುಗಳನ್ನು ಒಡೆಯುವುದು ತಪ್ಪು. ನಾನು ಹಿಂದುತ್ವದ ವಿರೋಧಿಯೇ ಹೊರತು ಹಿಂದೂ ವಿರೋಧಿಯಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ನಮ್ಮ ವಿರೋಧ ಖಂಡಿತಾ ಇಲ್ಲ. ಆದರೆ ಬಿಜೆಪಿಯವರು ಇದೇ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಧರ್ಮ, ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ರಾಮ, ಆಂಜನೇಯ ಮಂದಿರಗಳು ಪ್ರತೀ ಹಳ್ಳಿಗಳಲ್ಲಿವೆ. ನಾವೂ ಅವುಗಳ ನಿರ್ಮಾಣಕ್ಕೆ ಧನಸಹಾಯ ಮಾಡಿದ್ದೇವೆ. ರಾಮಮಂದಿರ ನಿರ್ಮಾಣವಾದರೆ ಎಲ್ಲರಿಗೂ ಖುಷಿಯೇ. ಆದರೆ ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ನಿಲುವಿಗೆ ನನ್ನ ವಿರೋಧವಿದೆ ಎಂದು ಅವರು ಹೇಳಿದರು.