ಮಾಜಿ ಯೋಧರ ಅವಲಂಬಿತರ ಗುರುತಿನ ಚೀಟಿ ಪಡೆಯುವಲ್ಲಿ ಮಹಿಳೆಯರ ಮೇಲಿನ ತಾರತಮ್ಯ ಸರಿಯಲ್ಲ: ಹೈಕೋರ್ಟ್
ಬೆಂಗಳೂರು, ಜ.5 : ಮಾಜಿ ಯೋಧರ ಅವಲಂಬಿತರ ಗುರುತಿನ ಚೀಟಿ ಪಡೆಯುವಲ್ಲಿ ಮಹಿಳೆಯರ ಮೇಲಿನ ತಾರತಮ್ಯವನ್ನು ತಡೆಯುವ ಸಲುವಾಗಿ ಪ್ರಸ್ತುತದ ನಿಯಮಗಳಲ್ಲಿ ಪುರುಷರು ಎಂದು ಇರುವ ಕಡೆ ಸಿಬ್ಬಂದಿ ಎಂದು ಬದಲಾಯಿಸಬೇಕು ಎಂದು ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದವರ ಮಗಳಿಗೆ ಮಾಜಿ ಯೋಧರ ಅವಲಂಬಿತರ ಗುರುತಿನ ಚೀಟಿ ನೀಡಲು ನಿರಾಕರಿಸಿದ್ದ ಸೈನಿಕ ಕಲ್ಯಾಣ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ಈ ಸೂಚನೆ ನೀಡಿದೆ. ಹಾಗೂ ಮಾಜಿ ಯೋಧರ ಪುತ್ರ ಅಥವಾ ಪುತ್ರಿ ಯಾರಾದರೂ 25 ವರ್ಷದ ನಂತರ ಅವರಿಗೆ ಒಂದೇ ಮಾರ್ಗಸೂಚಿ ಇರುತ್ತದೆ. 25 ವರ್ಷದ ಕೆಳಗಿನ ಪುತ್ರಿ ಮದುವೆ ಆಗಿದ್ದಾರೆ ಎನ್ನುವ ಒಂದೆ ಒಂದು ಕಾರಣಕ್ಕೆ, ಅವರು ಐಡಿ ಕಾರ್ಡ್ ಪಡೆಯುವ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದು ಸರಿಯಲ್ಲ. ಇದು ಸಂವಿಧಾನದ ಕಲಂ 14 ಮತ್ತು 15ರ ಉಲ್ಲಂಘನೆಯಾಗುತ್ತದೆ. ಪುತ್ರ ಮದುವೆ ಆಗಲಿ ಅಥವಾ ಆಗದಿದ್ದರೂ ಪ್ರಯೋಜನ ಪಡೆಯುತ್ತಾರೆ, ಆದರೆ ಪುತ್ರಿ ಅವಿವಾಹಿತರಾಗಿ ಉಳಿದರೆ ಮಾತ್ರ ಪ್ರಯೋಜನ ಪಡೆಯುತ್ತಾರೆ ಎಂಬ ನಿಯಮ ಸರಿಯಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಇದರ ಜೊತೆಗೆ ಈ ರೀತಿಯ ಪ್ರಕ್ರಿಯೆ ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ. ಲಿಂಗದ ಆಧಾರದ ಮೇಲೆ ಪ್ರಯೋಜನ ನೀಡುವುದು ಸರಿಯಲ್ಲ, ಇದು ಅಸಮಾನತೆಯಾಗುತ್ತದೆ. ಪುತ್ರಿ ಮದುವೆಯಾಗಿದ್ದ ತಕ್ಷಣ ಆಕೆಯ ಹಕ್ಕು ಮೊಟಕುಗೊಳಿಸುವುದು ಸರಿಯಲ್ಲ. ಪುತ್ರ ಪುತ್ರನಾಗಿಯೇ ಇದ್ದಾಗ, ಪುತ್ರಿಯನ್ನೂ ಸಹ ಅದೇ ರೀತಿ ಪರಿಗಣಿಸಬೇಕಾಗುತ್ತದೆ. ಮದುವೆ ಆಗುವುದರಿಂದ ಪುತ್ರನ ಸ್ಥಿತಿಗತಿ ಬದಲಾಗಲಿಲ್ಲವೆಂದರೆ, ಪುತ್ರಿಯ ಸ್ಥಾನ ಏಕೆ ಬದಲಾಗಬೇಕು ಎಂದೂ ಆದೇಶದಲ್ಲಿ ಪ್ರಶ್ನಿಸಿದೆ.
ಈ ವಿಚಾರವಾಗಿ ಗುರುತಿನ ಚೀಟಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ತಾರತಮ್ಯ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಪೀಠ, ಆ ಕುರಿತು ಅಗತ್ಯ ತಿದ್ದುಪಡಿ ಮಾಡುವಂತೆ ಸೂಚಿಸಿದೆ. ಹಾಗೂ ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಇಂದು ಅತ್ಯುನ್ನತ ಸ್ಥಾನಗಳನ್ನು ಗಳಿಸುತ್ತಿದ್ದಾರೆ. ಅಲ್ಲದೆ, ಶತಮಾನಗಳಷ್ಟು ಹಳತಾದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿದ್ದ ಲಿಂಗ ತಾರತಮ್ಯ ಹೋಗಲಾಡಿಸಬೇಕು ಮತ್ತು ನೀತಿ ನಿರೂಪಕರು ಈ ಬಗ್ಗೆ ಚಿಂತನೆ ನಡೆಸಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಜತೆಗೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 2021ರ ಆ.26ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಅರ್ಜಿದಾರರನ್ನು ನಿವೃತ್ತ ಯೋಧರ ಕೋಟಾದಲ್ಲಿ ಪರಿಗಣಿಸಬೇಕು ಎಂದೂ ಸಹ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಕೆಇಎ ನಡೆಸುವ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಮಾಜಿ ಯೋಧರ ಕೋಟಾದಲ್ಲಿ ಅರ್ಜಿ ಸಲ್ಲಿಸಿದ್ದರು. ಅದಕ್ಕಾಗಿ ತಮ್ಮ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ಅವಲಂಬಿತರ ಗುರುತಿನ ಚೀಟಿಗೆ ಸೈನಿಕ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ ಅರ್ಜಿದಾರರು ವಿವಾಹವಾಗಿರುವುದರಿಂದ ನಿಯಮದಂತೆ ಅವರಿಗೆ ಐಡಿ ಕಾರ್ಡ್ ನೀಡಲಾಗದು ಎಂದು ಇಲಾಖೆ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.