ರೋಹಿತ್ ಚಕ್ರತೀರ್ಥರಿಗೆ ಆಹ್ವಾನ: ಪ್ರಗತಿಪರ ಚಿಂತಕರಿಂದ ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಅಭಿಯಾನ
ಶಿವಮೊಗ್ಗ, ಡಿ.27: ತೀರ್ಥಹಳ್ಳಿಯಲ್ಲಿ ಕಡಗೋಲು ವಿಚಾರ ಮಂಥನ ವೇದಿಕೆ ವತಿಯಿಂದ ಡಿ.28 ರಂದು ಸಂಜೆ ಆಯೋಜಿಸಿರುವ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಎಂಬ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಕ್ಕೆ ರೋಹಿತ್ ಚಕ್ರತೀರ್ಥ ಅವರನ್ನು ಆಹ್ವಾನಿಸಿರುವುದಕ್ಕೆ ಪ್ರಗತಿಪರ ಚಿಂತಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ರೋಹಿತ್ ಚಕ್ರತೀರ್ಥ ವಿರುದ್ಧ ಪ್ರಗತಿಪರ ಚಿಂತಕರು ಸಾಮಾಜಿಕ ಜಾಲತಾಣದಲ್ಲಿ `ಗೋ ಬ್ಯಾಕ್’ ಅಭಿಯಾನ ಆರಂಭಿಸಿದ್ದು, ಇದಕ್ಕೆ ಬಾರಿ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯವನ್ನು ಅವಹೇಳನ ಮಾಡಿದ ಆರೋಪ ಹೊಂದಿರುವ ರೋಹಿತ್ ಚಕ್ರತೀರ್ಥ ಅವರು ಕುವೆಂಪು ಹುಟ್ಟೂರಿಗೆ ಕಾಲಿಡಬಾರದು ಎಂಬ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೆಂಪೆ ದೇವರಾಜ್ ಅವರು ಭಾರತ ಜನನಿಯ ತನುಜಾತೆ ಎನ್ನುವ ಕವಿತೆಯನ್ನು ಯಾರು ದೇಶಕ್ಕೆ ನೀಡಿದರೋ ಅಂತಹ ವ್ಯಕ್ತಿಯನ್ನು ಅವಮಾನ ಮಾಡಿ ಆ ಸಾಹಿತ್ಯವನ್ನೇ ತಿರುಚಿದ ವ್ಯಕ್ತಿಯನ್ನು ತೀರ್ಥಹಳ್ಳಿಗೆ ಕರೆಸುತ್ತಿದ್ದಾರೆ. ಚುನಾವಣೆಯ ಮತಕ್ಕಾಗಿ ಆತನನ್ನು ಕರೆಸುತ್ತಿದ್ದಾರೆ. ಆದರೆ ಕುವೆಂಪು ಅವರನ್ನು ಅವಮಾನ ಮಾಡಿದವನನ್ನು ಮತಕ್ಕಾಗಿ ಕರೆಸಬಾರದು. ರಾಜಕೀಯ ಅಜೆಂಡಾ ಏನೇ ಇದ್ದರೂ ಚುನಾವಣೆಯಲ್ಲಿ ತೋರಿಸಿ ಆದರೆ ಕುವೆಂಪು ಅವರ ವಿಷಯವನ್ನು ಇಟ್ಟುಕೊಂಡು ರಾಜಕೀಯ ಮಾಡಬೇಡಿ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಚಕ್ರತೀರ್ಥರನ್ನು ಆಯ್ಕೆ ಮಾಡಿದ್ದೇ ಡಬಲ್ ಇಂಜಿನ್ ಸರ್ಕಾರ ಮಾಡಿರುವ ತಪ್ಪು. ತನ್ನ ತಪ್ಪುಗಳನ್ನು ಬಿಜೆಪಿಯವರು ಇಲ್ಲಿಯವರೆಗೆ ಒಪ್ಪಿಕೊಂಡಿಲ್ಲ. ಕುವೆಂಪು ಅವರನ್ನು ಅವಮಾನ ಮಾಡಿರುವ ಚಕ್ರತೀರ್ಥ ಈ ತಾಲೂಕಿಗೆ ಕಾಲಿಡಬಾರದು ಎಂದು ಒತ್ತಾಯಿಸಿದ್ದಾರೆ.
ಹಾಗೂ ತೀರ್ಥಹಳ್ಳಿಯ ಎಪಿಎಂಸಿ ಮಾಜಿ ಅಧ್ಯಕ್ಷರು, ಪ್ರಗತಿಪರ ಚಿಂತಕ ಮಹಾಬಲೇಶ್ ಅವರು ಪ್ರತಿಕ್ರಿಯೆ ನೀಡಿ, ನಮ್ಮ ತಾಲೂಕಿನ ಹೆಮ್ಮೆಯ ಪುತ್ರ, ರಾಷ್ಟ್ರದ ಕವಿ ಕುವೆಂಪು ಅವರಿಗೆ ರೋಹಿತ್ ಚಕ್ರ ತೀರ್ಥ ಅಪಮಾನ ಮಾಡಿದ್ದು ನಮ್ಮ ತಾಲೂಕಿನ ಜನರಿಗೆ ಮಾಡಿದ ಅಪಮಾನ ಅದರಿಂದ ಅವರು ತಾಲೂಕಿಗೆ ಬರುವ ನೈತಿಕತೆ ಕಳೆದುಕೊಂಡಿದ್ದು ಅವರ ಆಗಮನಕ್ಕೆ ನಮ್ಮ ಹಾಗೂ ತಾಲೂಕಿನ ಜನತೆಯ ವಿರೋಧವಿದೆ. ವಿರೋಧದ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಿದರೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ತೀರ್ಥಹಳ್ಳಿ ಒಕ್ಕಲಿಗರ ಸಂಘದ ಅಧ್ಯಕ್ಷ ಬಾಳೆಹಳ್ಳಿ ಪ್ರಭಾಕರ್ ಅವರು ಪ್ರತಿಕ್ರಿಯೆ ನೀಡಿ, ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿ ಆಗಮಿಸುತ್ತಿದ್ದು ಆ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಏನೆಲ್ಲಾ ಮಾಡಬೇಕೋ ಅದನ್ನ ಬಿಜೆಪಿ ಪಕ್ಷದವರು ಮಾಡುತ್ತಿದ್ದಾರೆ. ನಮ್ಮ ನಾಡಿನ ಮೇರು ಕವಿಯನ್ನು ಚಕ್ರತೀರ್ಥ ಅವಮಾನ ಮಾಡಿದ್ದಾರೆ. ಕುವೆಂಪು ಅವರ ಬಗ್ಗೆ ನಾವು ಶಾಲೆಗಳಿಂದಲೂ ಕೂಡ ಓದಿ ಅವರ ಬಗ್ಗೆ ಕೇಳಿ ಅದನ್ನು ನಾವೆಲ್ಲರೂ ಮೈಗೂಡಿಸಿಕೊಂಡಿದ್ದೇವೆ. ಈಗಲೂ ಸಮಯಾವಕಾಶ ಇದ್ದು ರಾಷ್ಟ್ರಕವಿಯನ್ನು ಅವಮಾನ ಮಾಡಿದಂತ ರೋಹಿತ್ ಚಕ್ರತೀರ್ಥರನ್ನು ಕರೆಸದಂತೆ ರಾಮೇಶ್ವರ ದೇವರು ಬಿಜೆಪಿಯವರಿಗೆ ಬುದ್ಧಿ ನೀಡಲಿ” ಎಂದು ಹೇಳಿದ್ದಾರೆ.