ಬೆಂಗಳೂರು: ಮನೆ ಖರೀದಿಸುವ ನೆಪದಲ್ಲಿ ವಂಚನೆ : ಬಿಜೆಪಿ ಮುಖಂಡನ ವಿರುದ್ಧ ಮಾಜಿ ಸೈನಿಕನ ಪತ್ನಿಯಿಂದ ಆರೋಪ

ಬೆಂಗಳೂರು, ಡಿ.27 : ಬಿಜೆಪಿಯ ಮುಖಂಡ ಎ.ಎಚ್ ಆನಂದ್ ಎಂಬಾತ ಆಸ್ತಿಯನ್ನು ಖರೀದಿಸುವುದಾಗಿ ಹೇಳಿ ಸಂಪೂರ್ಣ ಮೊತ್ತದ ಹಣ ನೀಡದೆ ವಂಚಿಸಿರುವುದಾಗಿ ಮಾಜಿ ಸೈನಿಕರೊಬ್ಬರ ಪತ್ನಿ ಕೆ. ನಿರ್ಮಲ ಬಾಯಿ ಎಂಬವರು ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, 2014ರಲ್ಲಿ ತನ್ನ ವಾಸದ ಮನೆಯನ್ನು 70 ಲಕ್ಷ ರೂ.ಗಳಿಗೆ ಕೊಂಡುಕೊಳ್ಳುವುದಾಗಿ ವ್ಯವಹಾರವನ್ನು ನಡೆಸಿದ್ದ ಎ.ಎಚ್. ಆನಂದ್, 15 ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡಿದ್ದನು. ಬಾಕಿ ಹಣವನ್ನು ನೋಂದಣಿ ಸಮಯದಲ್ಲಿ ನೀಡುವುದಾಗಿ ಹೇಳಿದ್ದನು. ಬಳಿಕ ಬಾಕಿ 55 ಲಕ್ಷ ರೂ. ಹಣವನ್ನು ನೀಡದೆ, 13 ಲಕ್ಷ ರೂ. ಹಣವನ್ನು ನೀಡಿ ಕ್ರಯ ಮಾಡಿಸಿಕೊಂಡಿದ್ದಾನೆ. ಉಳಿದ 42 ಲಕ್ಷ ರೂ. ಹಣವನ್ನು ನೀಡದೆ ವಂಚಿಸುತ್ತಿದ್ದಾನೆ’ ಎಂದು ಆರೋಪಿಸಿದ್ದಾರೆ.

‘ಎ.ಎಚ್. ಆನಂದ್ ನನಗೆ ಅನ್ಯಾಯ ಮಾಡಿದ ಕಾರಣ, ಲೀಗಲ್ ನೋಟೀಸ್ ಗಳನ್ನು ಜಾರಿ ಮಾಡಿದ್ದೇವೆ. ಆದುದರಿಂದ ನನ್ನ ಮೇಲೆ ದ್ವೇಷ, ಅಸೂಹೆ ಬೆಳೆಸಿಕೊಂಡು, ಪ್ರಾಣ ಬೆದರಿಕೆ ಹಾಕುತ್ತಿದ್ದಾನೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರನ್ನು ಸಂಪರ್ಕಿಸಿದರೂ, ಯಾವುದೇ ಪ್ರಯೋಜನ ಆಗಿಲ್ಲ. ಆದರೆ ಎ.ಎಚ್. ಆನಂದ್ ಬೆದರಿಕೆ ಮುಂದುವರೆಸಿದ್ದಾನೆ’. ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಎಚ್. ಆನಂದ್ ಮತ್ತು ಇತರರ ಮೇಲೆ ವೈಯಾಲಿಕಾವಲ್ ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಎಫ್.ಐ.ಆರ್ ಸಹ ದಾಖಲಾಗಿದೆ. ಆದರೂ ತನ್ನ ರಾಜಕೀಯ ಪ್ರಭಾವನ್ನು ಬಳಸಿಕೊಂಡು ನನ್ನ ಮೇಲೆ ಸೇಡು ತಿರಿಸಿಕೊಳ್ಳುತ್ತಿದ್ದೇನೆ. ಮಾನಸಿಕ ಕಿರುಕುಳದಿಂದಾಗಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು, ಕಳೆದ ವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ. ಈ ಅನಾಹುತಗಳಿಗೆ ಎ.ಎಚ್. ಆನಂದ್ ಮೂಲ ಕಾರಣ ಎಂದು ದೂರಿದ್ದಾರೆ.

ಜಮೀನು ಖರೀದಿ ವಿವಾದದ ಹಂತದಲ್ಲಿದ್ದರೂ, ಲಿಟಿಗೇಷನ್ ಅನ್ನು ಮುಚ್ಚಿ ಹಾಕಿ ನನ್ನ ಸ್ವಾಧೀನದಲ್ಲಿರುವ ಮನೆಯನ್ನು ಅನುಮತಿಯಿಲ್ಲದೆ, ರಾಜಾನುಕುಂಟೆಯಲ್ಲಿರುವ ಎಸ್.ಬಿ.ಐ. ಬ್ಯಾಂಕ್ ನಲ್ಲಿ ಅಡವಿಟ್ಟು 50 ಲಕ್ಷ ರೂ. ಹಣ ಪಡೆದಿದ್ದಾನೆ. ಆದರೆ ನನಗೆ ಪಾವತಿ ಮಾಡಬೇಕಾದ 42 ಲಕ್ಷ ರೂ.ಗಳನ್ನು ಇನ್ನೂ ಪಾವತಿ ಮಾಡಿಲ್ಲ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ವಕೀಲ ಕೃಷ್ಣಯ್ಯ, ಸತೀಶ್ ರಾವ್ ಮತ್ತು ಶಾಂತಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!