ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ವಿರೋಧ: ಮಠಾಧೀಶರಿಂದ ಧರಣಿ
ಚಿತ್ರದುರ್ಗ ಡಿ.26 : ಪೋಕ್ಸೋ ಪ್ರಕರಣದಡಿ ಮುರುಘಾ ಶ್ರೀಗಳು ಜೈಲು ಪಾಲಾಗಿರುವ ಕಾರಣ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ ಸರ್ಕಾರದ ಕ್ರಮವನ್ನು ವಿರೋಧಿಸಿ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ನಡೆಸಲಾಯಿತು.
ಈ ವೇಳೆ ಮುರುಘಾ ಮಠದ ಉಸ್ತುವಾರಿಯಾಗಿದ್ದ ಬಸವಪ್ರಭು ಸ್ವಾಮೀಜಿ ಅವರು ಮಾತನಾಡಿ, ಮುರುಘಾ ಮಠಕ್ಕೆ ಭವ್ಯ ಪರಂಪರೆ ಇದೆ. ಸಮಾಜ ಸೇವೆಯಲ್ಲಿ ಮಠ ಛಾಪು ಮೂಡಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ ಮುರುಘಾ ಮಠ, ಬಡ ವಿದ್ಯಾರ್ಥಿಗಳಿಗೆ ಮೊದಲು ಹಾಸ್ಟೆಲ್ ಸ್ಥಾಪಿಸಿತು. ಬೆಳಗಾವಿ, ಮಹಾರಾಷ್ಟ್ರ, ಮೈಸೂರು, ಕಾಶಿ ಸೇರಿ ದೇಶದ ಹಲವೆಡೆ ಹಾಸ್ಟೆಲ್ ಸ್ಥಾಪಿಸಿದ ಕೀರ್ತಿ ಮುರುಘಾ ಮಠಕ್ಕೆ ಸಲ್ಲುತ್ತದೆ. ರಾಜ್ಯದ ಉಳಿದ ಮಠಗಳು ಮುರುಘಾ ಮಠದ ಆದರ್ಶ ಪಾಲನೆ ಮಾಡುತ್ತಿವೆ’ ಎಂದರು.
`ದೇಶದಲ್ಲಿರುವ ಕಾನೂನುಗಳಿಗೆ ಅನುಗುಣವಾಗಿ ಮುರುಘಾ ಮಠದಲ್ಲಿ ಟ್ರಸ್ಟ್ ಹಾಗೂ ವಿದ್ಯಾಪೀಠದ ಸೊಸೈಟಿ ಇದೆ. ಇವು ಎರಡೂ ಕಾನೂನು ಬದ್ಧ ರಚನೆ ಆಗಿವೆ. ಶಿವಮೂರ್ತಿ ಶರಣರು ಹೈಕೋರ್ಟ್ ನಿರ್ದೇಶನದ ಮೇರೆಗೆ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ನೀಡಿದ್ದಾರೆ. ಮಠದ ಆಡಳಿತದಲ್ಲಿ ಯಾವುದೇ ವ್ಯತ್ಯಾಸ ಉಂಟಾಗಿಲ್ಲ. ಅನ್ನ ದಾಸೋಹ, ಶಿಕ್ಷಣ ಸಂಸ್ಥೆ, ಸಿಬ್ಬಂದಿ ವೇತನ ಎಲ್ಲವೂ ಸುಸೂತ್ರವಾಗಿ ನಡೆದಿವೆ. ಆದರೂ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವ ಮುನ್ನ ನೋಟಿಸ್ ನೀಡಬೇಕಿತ್ತು. ಸರ್ಕಾರವೇ ಕಾನೂನು ಉಲ್ಲಂಘನೆ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಿದ್ದು ಖಂಡನೀಯ’ ಎಂದು ಆಕ್ರೋಶ ಹೊರಹಾಕಿದರು.
ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿ ದೊಡ್ಡ ಅನ್ಯಾಯ ಮಾಡಿದೆ. ಸರ್ಕಾರದ ಈ ಆದೇಶ ಇನ್ನೂ ಮುರುಘಾ ಮಠವನ್ನು ತಲುಪಿಲ್ಲ. ಆದರೆ, ಆಡಳಿತಾಧಿಕಾರಿ ದೌರ್ಜನ್ಯ ಮಾಡಲು ಶುರು ಮಾಡಿದ್ದಾರೆ. ಮಠದ ದರ್ಬಾರ್ ಹಾಲ್ಗೆ ಬೀಗ ಜಡಿದು ಮಠದ ಭಕ್ತರಲ್ಲಿ ನೋವುಂಟು ಮಾಡಿದ್ದಾರೆ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಬೇಕು. ಇಲ್ಲವಾದರೆ, ಲಕ್ಷಾಂತರ ಭಕ್ತರು, ನಾಡಿನ ಎಲ್ಲ ಮಾಠಾಧೀಶರು ಬೀದಿಗೆ ಇಳಿದು ಹೋರಾಟ ಮಾಡಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು. ಹಾಗೂ `ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸುವಾಗ ಶಿವಮೂರ್ತಿ ಶರಣರ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆಸಲಾಯಿತು. ಬೆಂಗಳೂರಿನಲ್ಲಿ 500 ಮಠಾಧೀಶರು ಒಂದೆಡೆ ಸೇರಿ ಬಿಜೆಪಿಗೆ ಸಂದೇಶ ರವಾನೆ ಮಾಡಿದರು. ಇದರ ಫಲವಾಗಿ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಮುಖ್ಯಮಂತ್ರಿಯಾಗಿ ನೇಮಕ ಮಾಡಿತು. ಇದನ್ನು ಬೊಮ್ಮಾಯಿ ಮರೆತು ನಡೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
ಇದೇ ವೇಳೆ ಬನವಾಸಿಯ ನಾಗಭೂಷಣ ಸ್ವಾಮೀಜಿ ಅವರು ಮಾತನಾಡಿ, ಮುರುಘಾ ಮಠದ ಶಿವಮೂರ್ತಿ ಶರಣರು ನಾಡಿನಲ್ಲಿ ಜ್ಯೋತಿಯಾಗಿ ಬೆಳಗಿದ್ದಾರೆ. ಮೂಲಭೂತ ಶಕ್ತಿಗಳು ಈ ಜ್ಯೋತಿ ಆರಿಸುವ ಹುನ್ನಾರ ನಡೆಸಿವೆ. ಪ್ರಗತಿಪರ ವಿಚಾರಧಾರೆ, ಧರ್ಮ ಸೇವೆ ಮಾಡುವವರನ್ನು ಈ ಸರ್ಕಾರ ಹತ್ತಿಕ್ಕಲು ಮುಂದಾಗಿದೆ. ಒಳ್ಳೆಯ ಚಿಂತಕರನ್ನು ಹಣಿಯುವ ಹುನ್ನಾರ ನಡೆಸಿದೆ. ಚಾತುರ್ವರ್ಣ ವ್ಯವಸ್ಥೆ ಮತ್ತೆ ಸ್ಥಾಪಿಸಿ, ಲಿಂಗಾಯತ ಧರ್ಮವನ್ನು ಹೊಸಕಿ ಹಾಕುತ್ತಿದೆ. ಮಠ ಹಾಗೂ ಸಮಾಜವನ್ನು ಬ್ರಾಹ್ಮಣೀಕರಣ ಮಾಡಲು ಹವಣಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೂ `ಲಿಂಗಾಯತ ಸಮುದಾಯದ ಬೆಂಬಲದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಇದೆ ಬಿಜೆಪಿ, ಲಿಂಗಾಯತ ಸಮುದಾಯಕ್ಕೆ ಮುಳ್ಳಾಗಿದೆ. ಬಿಜೆಪಿಯನ್ನು ರಾಜ್ಯದಿಂದ ಗಂಟುಮೂಟೆ ಕಟ್ಟಿಸುವ ಕಾರ್ಯವನ್ನು ಲಿಂಗಾಯತ ಮಠಗಳು ಮಾಡಲಿವೆ’ ಎಂದು ಎಚ್ಚರಿಕೆ ನೀಡಿದರು.
ಭಕ್ತರು ಹಳೆ ಮಾಧ್ಯಮಿಕ ಶಾಲಾ ಆವರಣದಿಂದ ಹೊರಟು ಪ್ರವಾಸಿ ಮಂದಿರ, ಒನಕೆ ಓಬವ್ವ ವೃತ್ತದ ಮೂಲಕ ಧರಣಿ ಸ್ಥಳಕ್ಕೆ ಧಾವಿಸಿದರು. ಸರ್ಕಾರದ ಕ್ರಮವನ್ನು ಒಕ್ಕೊರಲಿನಿಂದ ಖಂಡಿಸಿದರು. ಹಾಗೂ ನೇಮಕಾತಿ ಆದೇಶವನ್ನು ಸರ್ಕಾರ ಕೂಡಲೇ ರದ್ದುಪಡಿಸಬೇಕು ಹಾಗೂ ಆಡಳಿತಾಧಿಕಾರಿ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ರಾಯಚೂರು ಬಸವಕೇಂದ್ರದ ಅಧ್ಯಕ್ಷ ವೀರಭದ್ರಪ್ಪ, ಕಲಬುರಗಿಯ ಸಿದ್ದಬಸವ ಕಬೀರ ಸ್ವಾಮೀಜಿ, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಯಲ್ಲಪ್ಪ ಅವರು ಭಾಗವಹಿಸಿದರು.