ಕೇರಳ-ತಮಿಳುನಾಡು ಗಡಿಯಲ್ಲಿ ಕಂದಕಕ್ಕೆ ಬಿದ್ದ ಕಾರು: 8 ಮಂದಿ ಅಯ್ಯಪ್ಪ ಭಕ್ತರ ದುರ್ಮರಣ
ಕೇರಳ ಡಿ.24 : ಕಾರೊಂದು ಕಂದಕಕ್ಕೆ ಬಿದ್ದು 8 ಮಂದಿ ಅಯ್ಯಪ್ಪ ಭಕ್ತರು ಮೃತಪಟ್ಟಿರುವ ಘಟನೆ ಕೇರಳ ಮತ್ತು ತಮಿಳುನಾಡು ಗಡಿಯಲ್ಲಿರುವ ಥೇಣಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕುಮಿಲಿ ಪರ್ವತ ಪ್ರದೇಶದಲ್ಲಿ ದುರಂತ ಸಂಭವಿಸಿದ್ದು, ಸುಮಾರು 40 ಅಡಿ ಆಳದ ಕಂದಕಕ್ಕೆ ಅಯ್ಯಪ್ಪ ಭಕ್ತರಿದ್ದ ಕಾರು ಉರುಳಿದೆ. ಅಪಘಾತ ಸಂಭವಿಸಿದಾಗ ಕಾರಿನಲ್ಲಿ ಒಟ್ಟು 10 ಮಂದಿ ಇದ್ದರು, ಈ ಎಲ್ಲಾ ಪ್ರಯಾಣಿಕರು ಥೇಣಿ-ಅಂಡಿಪೆಟ್ಟಿ ನಿವಾಸಿಗಳಾಗಿದ್ದರು. ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ 3 ವರ್ಷದ ಒಂದು ಮಗುವೂ ಸೇರಿದೆ ಎಂದು ತಿಳಿದು ಬಂದಿದೆ.
ಈ ಪ್ರದೇಶದಲ್ಲಿ ಮಂಜು ತೀವ್ರವಾಗಿ ಮುಸುಕಿದ್ದ ಕಾರಣ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅಪಘಾತಕ್ಕೆ ಇದು ಮುಖ್ಯ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.