ಸಿಕ್ಕಿಂ: ಕಂದಕಕ್ಕೆ ಉರುಳಿದ ಸೇನಾ ವಾಹನ, 16 ಯೋಧರು ಹುತಾತ್ಮ

ಸಿಕ್ಕಿಂ: ಉತ್ತರ ಸಿಕ್ಕಿಂನ ಲಾಚೆನ್ ಪಟ್ಟಣದಲ್ಲಿ ಭಾರತೀಯ ಸೇನೆಯ ವಾಹನವು ಕಂದಕಕ್ಕೆ ಉರುಳಿದ ಪರಿಣಾಮ16 ಯೋಧರು ಹುತಾತ್ಮರಾಗಿದ್ದು ನಾಲ್ವರ ಯೋಧರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಏರ್ ಲಿಫ್ಟ್ ಮಾಡಲಾಗಿದೆ.

ಚಟ್ಟೇನ್‌ನಿಂದ ಥಂಗು ಕಡೆಗೆ ತೆರಳುತ್ತಿದ್ದ ಸೇನಾ ವಾಹನ ತಿರುವು ಪಡೆಯುವಾಗ ಕಡಿದಾದ ಕಂದಕಕ್ಕೆ ಜಾರಿದೆ. ಅಪಘಾತದಲ್ಲಿ ಸೇನಾ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಾಯಗೊಂಡ ನಾಲ್ವರನ್ನು ಏರ್ ಲಿಫ್ಟ್ ಮಾಡಲಾಗಿದೆ. ಹುತಾತ್ಮರಾದವರಲ್ಲಿ ಮೂವರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಮತ್ತು 13 ಯೋಧರು ಸೇರಿದ್ದಾರೆ. ಯೋಧರ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದ್ದು ಮರಣೋತ್ತರ ಪರೀಕ್ಷೆಗಾಗಿ ಗ್ಯಾಂಗ್‌ಟಾಕ್‌ನ ಸರ್ಕಾರಿ ಎಸ್‌ಟಿಎನ್‌ಎಂ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದ್ದು, ನಂತರ ಸೇನೆಗೆ ಹಸ್ತಾಂತರಿಸಲಾಗುತ್ತದೆ.

ಸಂತಾಪ ಸೂಚಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಉತ್ತರ ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತೀಯ ಸೇನೆಯ ಯೋಧರ ಸಾವಿನಿಂದ ನನಗೆ ತೀವ್ರ ನೋವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಹುತಾತ್ಮ ಯೋಧರ ಸೇವೆ ಮತ್ತು ಬದ್ಧತೆಗೆ ರಾಷ್ಟ್ರವು ಕೃತಜ್ಞವಾಗಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ನಾನು ಸಂತಾಪ ತಿಳಿಸುತ್ತೇನೆ. ಇನ್ನು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುವುದಾಗಿ ಹೇಳಿದ್ದಾರೆ

Leave a Reply

Your email address will not be published. Required fields are marked *

error: Content is protected !!