ಹಳೆಯಂಗಡಿ: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು ,ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ಹಳೆಯಂಗಡಿ(ಉಡುಪಿ ಟೈಮ್ಸ್ ವರದಿ): ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನದಿಗೆ ಬಿದ್ದ ಘಟನೆ ಪಾವಂಜೆ ಸೇತುವೆ ಬಳಿಯ ನಂದಿನಿ ನದಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಘಟನೆ ವೇಳೆ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಕೃಷ್ಣಾಪುರ ಕಾಟಿಪಳ್ಳದ ನಿವಾಸಿ ಅಶ್ರಫ್ ಅವರು ಸ್ನೇಹಿತನೊಂದಿಗೆ ಪಾವಂಜೆ ಬಳಿಯ ಅರಾಂದ್ ಎಂಬ ಸ್ಥಳಕ್ಕೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಪಾವಂಜೆ ಸೇತುವೆ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ನಂದಿನಿ ನದಿಗೆ ಇಳಿದಿದೆ.
ಕಾರು ನದಿಯಲ್ಲಿ ಮುಳುಗುತ್ತಿದ್ದಂತೆ ಅಶ್ರಫ್ ಮತ್ತು ಅವರ ಸ್ನೇಹಿತ ಕಾರಿನಿಂದ ಹೊರಬಂದು ಈಜಿ ದಡ ಸೇರಿ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳೀಯರ ಸಹಾಯದಿಂದ ಕ್ರೇನ್ ಮೂಲಕ ಕಾರನ್ನು ನದಿಯಿಂದ ಮೇಲೆತ್ತಿದರು.