ನವದೆಹಲಿ:ನೂತನ ಸಂಸತ್ ಭವನಕ್ಕೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್
ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತಂತೆ ಆದೇಶ ನೀಡಿರುವ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ, ಈ ಯೋಜನೆಗೆ ನೀಡಿರುವ ಅನುಮತಿಗಳಲ್ಲಿ ಯಾವುದೇ ದೋಷವಿಲ್ಲ. ಹಾಗಾಗಿ ಸರ್ಕಾರ ಸೆಂಟ್ರಲ್ ವಿಸ್ತಾ ಕಾಮಗಾರಿಯನ್ನ ಮುಂದುವರಿಸಬಹುದು ಎಂದು ಹೇಳಿದೆ.
ಸದ್ಯ ನಿರ್ಮಾಣಕ್ಕೆ ಸಿದ್ದವಿರುವ ಸೆಂಟ್ರಲ್ ವಿಸ್ತಾ 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ತ್ರಿಭುಜಾಕೃತಿಯಲ್ಲಿರಲಿದೆ. ಇದು 50 ಅಡಿ ಎತ್ತರ, ನಾಲ್ಕು ಅಂತಸ್ತು ಹಾಗೂ ಆರು ಪ್ರವೇಶ ದ್ವಾರ ಹೊಂದಿರಲಿದೆ. ಸೆಂಟ್ರಲ್ ವಿಸ್ತಾದಲ್ಲಿ 1224 ಆಸನ ವ್ಯವಸ್ಥೆ ಇರಲಿದ್ದು, ಇದರಲ್ಲಿ ಲೋಕಸಭೆಯಲ್ಲಿ 888 ಮತ್ತು ರಾಜ್ಯಸಭೆಯಲ್ಲಿ 384 ಆಸನಗಳಿರಲಿವೆ. ಲೋಕಸಭೆ ಮೇಲ್ಭಾಗ ಗರಿಬಿಚ್ಚಿದ ನವಿಲಿನ ಆಕೃತಿ ಮತ್ತು ರಾಜ್ಯಸಭೆಯ ಮೇಲ್ಭಾಗದಲ್ಲಿ ಅರಳಿದ ಕಮಲ ಆಕೃತಿ ಇರಲಿದೆ. ಹೊಸ ಸಂಸತ್ ಭವನ ಸುಮಾರು 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, 75ನೇ ಸ್ವತಂತ್ರ ದಿನಾಚರಣೆ ವೇಳಗೆ ಕಾಮಗಾರಿ ಅಂತ್ಯಗೊಳಿಸುವ ಗುರಿಯನ್ನ ಹೊಂದಲಾಗಿದೆ.
ಇನ್ನು ಸೆಂಟ್ರಲ್ ವಿಸ್ತಾ ಯೋಜನೆಗೆ ನೀಡಲಾಗಿರುವ ಎನ್ಓಸಿಗಳು ದೋಷಪೂರಿತವಾಗಿದೆ. ಪರಿಸರ ಸಚಿವಾಲಯದ ಅನುಮತಿಯೂ ಸರಿಯಾಗಿಲ್ಲ. ಕಟ್ಟಡ ನಿರ್ಮಿಸಲು ಬಳಸಲಾಗುವ ಜಮೀನು ಮತ್ತು ಅಂದಾಜು ಮೌಲ್ಯದ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಸಲಹೆಗಾರರನ್ನ ಆಯ್ಕೆ ಮಾಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ನಿರ್ಮಾಣಕ್ಕೆ ತಡೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಎಂ ಖಾನಿವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರ ತ್ರಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಸೆಂಟ್ರಲ್ ವಿಸ್ತಾ ನಿರ್ಮಾಣದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ನೂತನ ಸಂಸತ್ತು ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದಾರೆ.