ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವವರಿಗೆ ಸರಕಾರದಿಂದ ಗುಡ್ ನ್ಯೂಸ್

ಬೆಂಗಳೂರು, ಡಿ.7: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರಿಗೆ ಆನ್‍ಲೈನ್ ಮೂಲಕ ದರ್ಶನಕ್ಕೆ ಟಿಕೆಟ್ ಬುಕ್ ಮಾಡುವ ಸೌಲಭ್ಯ ನೀಡುವ ಮೂಲಕ ಸರಕಾರ ಸಿಹಿಸುದ್ದಿಯನ್ನು ನೀಡಿದೆ.

ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮೂಲಕ ಎಲ್.ಒನ್ ಮಾದರಿಯ ವಿಐಪಿ ಸೌಲಭ್ಯದೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ವ್ಯವಸ್ಥೆ ಮಾಡಿದೆ. ಈ ಮೂಲಕ ಸಾರಿಗೆ, ಊಟ, ವಸತಿ ಸೇರಿದಂತೆ ಎಲ್ಲಾ ವೆಚ್ಚಗಳು ಸೇರಿ ಸುಮಾರು 2,500 ರೂ.ಗಳಲ್ಲಿ ತಿರುಪತಿಗೆ ಹೋಗಿ ಬರಬಹುದಾಗಿದೆ.

ಈ ಹಿಂದೆಯೇ ಪ್ರವಾಸೋದ್ಯಮ ಇಲಾಖೆ ತಿರುಪತಿ ದರ್ಶನ ಸೌಲಭ್ಯವನ್ನು ಆರಂಭಿಸಿತ್ತು. ಆದರೆ ದಿನಕ್ಕೆ 200 ಮಂದಿಗೆ ಮಾತ್ರ ಇದು ಸೀಮಿತವಾಗಿತ್ತು. ಈಗ ಅದನ್ನು ದಿನಕ್ಕೆ 500 ಮಂದಿಗೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದಿಂದ ತಿರುಪತಿಗೆ ತೆರಳುವ ಭಕ್ತರಿಗೆ ಸಹಕಾರಿಯಾಗಿದೆ.

ಸದ್ಯ ತಿರುಪತಿ ಪ್ರವಾಸದ ಬಸ್ ಬೆಂಗಳೂರಿನಿಂದ ಹೊರಡುತ್ತದೆ. ಆದ್ದರಿಂದ ರಾಜ್ಯದ ಯಾವುದೇ ಜಿಲ್ಲೆಯಿಂದ ನೀವು ಪ್ರವಾಸ ಬುಕ್ ಮಾಡಿದರೂ ಬೆಂಗಳೂರಿಗೆ ಬರಬೇಕು. ದರ್ಶನದ ಹಿಂದಿನ ರಾತ್ರಿ ಬೆಂಗಳೂರಿನಿಂದ ಬಸ್ ಹೊರಡಲಿದೆ. ಮಾರ್ಗದ ನಡುವೆ ಉತ್ತಮ ಗುಣಮಟ್ಟದ ಊಟವಿದೆ. ಮಧ್ಯರಾತ್ರಿ ವೇಳೆಗೆ ಬಸ್ ತಿರುಪತಿ ತಲುಪಲಿದೆ. ಹಾಗೂ ತಿರುಪತಿಯಲ್ಲಿ ವಾಸ್ತವ್ಯಕ್ಕೆ ಹೋಟೆಲ್ ಇರುತ್ತದೆ. ಮರುದಿನ ಬೆಳಗ್ಗೆ ಸುಮಾರು ಒಂದು ಗಂಟೆ ದರ್ಶನಕ್ಕೆ ಕಾಯಬೇಕು. ಬಳಿಕ ವಿಐಪಿ ದರ್ಶನ ಸೌಲಭ್ಯವಿದೆ. ಬಳಿಕ ಉಪಹಾರ ಮತ್ತು ಮಧ್ಯಾಹ್ನದ ಊಟ ಮುಗಿಸಿ ರಾತ್ರಿ ಬೆಂಗಳೂರಿಗೆ ವಾಪಸ್ ಬಸ್ ಮರಳಲಿದೆ.

ತಿರುಪತಿ ಪ್ರವಾಸವನ್ನು ಮತ್ತಷ್ಟು ಸರಳಗೊಳಿಸಿ ಹೆಚ್ಚಿನ ಭಕ್ತರು ಭೇಟಿ ನೀಡಲು ಅವಕಾಶ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಶೀಘ್ರದಲ್ಲೇ ತನ್ನ ಕಚೇರಿಯಲ್ಲಿ ಈ ಪ್ರವಾಸಿ ಪ್ಯಾಕೇಜ್ ಮಾಹಿತಿ ನೀಡಲು ವಿಶೇಷ ಡೆಸ್ಕ್ ಸ್ಥಾಪನೆ ಮಾಡಲಿದೆ. ಸರ್ಕಾರದಿಂದ ಅಧಿಕೃತ ಒಪ್ಪಿಗೆ ಸಿಕ್ಕಿದ ಬಳಿಕ ಬಸ್, ಪ್ಯಾಕೇಜ್ ದರ ಸೇರಿದಂತೆ ಇತರ ವಿವರಗಳನ್ನು ಅಂತಿಮಗೊಳಿಸಲಾಗುತ್ತದೆ. ತಿರುಪತಿ ಪ್ರವಾಸವನ್ನು ಕೈಗೊಳ್ಳುವ ಜನರು ಈ ಪ್ಯಾಕೇಜ್ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಹೆಚ್ಚು ಕಾಯದೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಪ್ಯಾಕೇಜ್ ಸಹ ಕಡಿಮೆ ದರದಲ್ಲಿಯೇ ಇದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇದಕ್ಕಾಗಿ ಮಲ್ಟಿ ಆಕ್ಸೆಲ್, ವೋಲ್ವೋ, ಡಿಲಕ್ಸ್ ಬಸ್‍ಗಳನ್ನು ಬಳಕೆ ಮಾಡಿಕೊಳ್ಳಲಿದೆ. ಬಸ್‍ಗಳಿಗೆ ಅನುಗುಣವಾಗಿ ಟಿಕೆಟ್ ಶುಲ್ಕ ಬದಲಾಗಲಿದೆ. ಒಂದು ಟಿಕೆಟ್‍ಗೆ ಸುಮಾರು 300 ರೂ. ಗಿಂತ ಹೆಚ್ಚಿರಲಿದೆ. ಇನ್ನು ಭಕ್ತರ ವಾಸ್ತವ್ಯ ಮತ್ತು ಊಟ ಸೇರಿ ಇತರೆ ವೆಚ್ಚವಾಗಿ ಸುಮಾರು 2400 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಶೀಘ್ರದಲ್ಲಿಯೇ ಪ್ಯಾಕೇಜ್ ದರಗಳನ್ನು ಪ್ರಕಟಿಸಲಿದೆ.

ತಮಿಳುನಾಡು, ಕೇರಳ ಮತ್ತು ಇತರ ರಾಜ್ಯಗಳ ಭಕ್ತರಿಗೆ ಟಿಟಿಡಿ ವತಿಯಿಂದಲೇ ನಿತ್ಯ ದರ್ಶನಕ್ಕೆ ವ್ಯವಸ್ಥೆ ಇದೆ. ಆದರೆ ಕರ್ನಾಟಕದ 200 ಭಕ್ತರಿಗೆ ಮಾತ್ರ ಅವಕಾಶವಿತ್ತು. ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾದಾಗ ರಾಜ್ಯದ ಹೆಚ್ಚಿನ ಭಕ್ತರಿಗೆ ಅವಕಾಶ ನೀಡುವ ಕುರಿತು ಚರ್ಚಿಸಿದ್ದರು. ಹೆಚ್ಚಿನ ಭಕ್ತರಿಗೆ ಅವಕಾಶ ನೀಡುವ ಕುರಿತು ಸುಬ್ಬಾರೆಡ್ಡಿ ಭರವಸೆ ನೀಡಿದ್ದರು. ಆದ್ದರಿಂದ ಈಗ ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಈ ವಿಶೇಷ ಪ್ಯಾಕೇಜ್ ಜಾರಿಗೆ ತರುತ್ತಿದೆ. ಸದ್ಯ 500 ಭಕ್ತರಿಗೆ ಇರುವ ದರ್ಶನದ ವ್ಯವಸ್ಥೆಯನ್ನು 1000ಕ್ಕೆ ಏರಿಕೆ ಮಾಡುವ ಪ್ರಸ್ತಾವನೆ ಸಹ ಇಲಾಖೆಯ ಮುಂದಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!