ಬಿಜೆಪಿ ಸೇರಿದ 36 ರೌಡಿ ಶೀಟರ್’ಗಳು-10 ಮಂದಿಗೆ ವಿಧಾನಸಭಾ ಟಿಕೆಟ್: ಕಾಂಗ್ರೆಸ್ ಆರೋಪ

ಬೆಂಗಳೂರು, ಡಿ.6: ‘ಬಿಜೆಪಿ ಈಗ ರೌಡಿ ಮೋರ್ಚಾ ಆರಂಭಿಸಿದ್ದು, ಪ್ರಮುಖ 60 ರೌಡಿಗಳು ಈ ಮೋರ್ಚಾಗೆ ಸೇರಲು ಮುಂದಾಗಿದ್ದಾರೆ. ಅದರ ಮೊದಲ ಹಂತದಲ್ಲಿ ಈಗಾಗಲೇ 36 ರೌಡಿ ಶೀಟರ್ ಗಳು ಬಿಜೆಪಿ ಸೇರ್ಪಡೆ ಆಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಅವರು ಹೇಳಿದ್ದಾರೆ.

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ”ಬಿಜೆಪಿ ಸ್ನೇಹಿತರ ಬಳಿ ಈ ಬಗ್ಗೆ ಚರ್ಚೆ ಮಾಡಿದಾಗ, ನಮಗೆ ಅಮಿತ್ ಶಾ ಹಾಗೂ ಆರೆಸ್ಸೆಸ್ ಕಡೆಯಿಂದ ನಿರ್ದೇಶನವಿದೆ. ಈ ವಿಚಾರವಾಗಿ ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಪ್ರಯೋಗ ಮಾಡಿದ್ದಾರೆ. ಎಲ್ಲಿ ಮತ ಸಿಗುವುದಿಲ್ಲವೋ ಅಲ್ಲಿ ರೌಡಿಗಳನ್ನು ಕಳಿಸಿ ಪ್ರಚಾರ ಮಾಡಿಸಿ ಯಶಸ್ವಿಯಾಗಿದ್ದಾರೆ. ಈಗ ಅದನ್ನು ಕರ್ನಾಟಕದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ” ಎಂದು ಆರೋಪಿಸಿದರು.

ಬಿಜೆಪಿ ಸೇರ್ಪಡೆಗೊಳ್ಳಲಿರುವ ರೌಡಿಗಳ ಪೈಕಿ 24 ರೌಡಿಗಳ ಸೇರ್ಪಡೆ ಬಾಕಿ ಇದ್ದು, ರಾಜ್ಯದಲ್ಲಿ ಒಟ್ಟು 150 ರೌಡಿಗಳನ್ನು ಸೇರಿಸಿಕೊಳ್ಳಲು ಬಿಜೆಪಿಯವರು ಪಟ್ಟಿ ಮಾಡಿದ್ದಾರೆ’. ಹಾಗೂ ”36 ರೌಡಿಗಳ ಪೈಕಿ ಸೈಲೆಂಟ್ ಸುನೀಲ್ ಹಾಗೂ 9 ಇತರರು. ವಿಲ್ಸನ್ ಗಾರ್ಡನ್ ನಾಗ ಹಾಗೂ 6 ಇತರರು, ನಾಗಮಂಗಲದ ಫೈಟರ್ ರವಿ ಹಾಗೂ 5 ಇತರರು, ಬೆತ್ತನಗೆರೆ ಶಂಕರ ಹಾಗೂ 8 ಇತರರು, ಈತ ಹೆಸರು ಬದಲಾವಣೆ ಮಾಡಿಕೊಂಡು ನಲ್ಲೂರು ಶಂಕರೇಗೌಡ ಎಂದು ಪಕ್ಷ ಸೇರ್ಪಡೆ ಆಗಿದ್ದಾನೆ. ಮೈಸೂರು ಬಿಜೆಪಿ ಕಚೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಸಿದ್ದರಾಜು ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಾನೆ. ಒಂಟೆ ರೋಹಿತ್ ಹಾಗೂ ಇತರರು, ಕುಣಿಗಲ್ ಗಿರಿ ಈತ ಜೈಲಿನಲ್ಲಿದ್ದು, ಅಲ್ಲಿಂದಲೇ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಮಂಜುನಾಥ್ ಅಲಿಯಾಸ್ ಉಪ್ಪಿ, ಸೈತಾನ್ ರವಿ (ಸಿ.ಟಿ ರವಿ), ಈತ ಹಾಲಿ ಶಾಸಕರು, ಇನ್ನು ಪ್ರತಾಪ್ ಸಿಂಹ, ಇವರನ್ನು ಸುಮಲತಾ ಅವರು ಪೇಟೆ ರೌಡಿ ಎಂದು ಕರೆದಿದ್ದಾರೆ. ಕೊನೆಯದಾಗಿ ಕಿರಣ್ ಗೌಡ, ಈತ ಯುವ ದಸರಾಗೆ ಅಧ್ಯಕ್ಷರಾಗಿದ್ದು, ಪ್ರತಾಪ್ ಸಿಂಹ ಅವರ ಹಿಂಬಾಲಕ. ಮುಂದಿನ ಹಂತದಲ್ಲಿ ಉಳಿದ 24 ರೌಡಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದರು.

”ಈ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ನಳೀನ್ ಕುಮಾರ್ ಕಟೀಲ್, ಸಿ.ಟಿ ರವಿ ಹಾಗೂ ಅಶೋಕ್ ಅವರು ಹೇಳಿದ್ದು, ಇದು ಕೇವಲ ಗಮನ ತಣ್ಣಗೆ ಮಾಡುವ ಪ್ರಯತ್ನ. ಸಿ.ಟಿ ರವಿ ಹತಾಶರಾಗಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಈ ರೌಡಿಗಳ ಪೈಕಿ 10 ಮಂದಿಗೆ ವಿಧಾನಸಭೆ ಚುನಾವಣೆ ಟಿಕೆಟ್, 26 ಜನರಿಗೆ ಬಿಬಿಎಂಪಿ ಚುನಾವಣೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ರೌಡಿಗಳಿಂದ ರೌಡಿಗಳಿಗಾಗಿ, ರೌಡಿಗಳಿಗೋಸ್ಕರ ಇದು ಬಿಜೆಪಿ ರೌಡಿ ಮೋರ್ಚಾದ ಘೋಷವಾಕ್ಯವಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.

‘ಇವರನ್ನು ಯಾವುದೇ ಕಾರಣಕ್ಕೂ ಸೇರಿಸಿ ಕೊಳ್ಳುವುದಿಲ್ಲ ಎಂದು ಕಟೀಲ್ ಅವರು ಹೇಳಿರುವುದು ಸುಳ್ಳು. ರೌಡಿಶೀಟರ್ ಗಳೆಲ್ಲಾ ರೌಡಿಗಳಲ್ಲ ಎಂದು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಸೇರುವ ರೌಡಿಗಳ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ಹೊರತೆಗೆಯಲು ಗೃಹ ಸಚಿವರಿಂದ ಪೊಲೀಸ್ ಇಲಾಖೆಗೆ ಮೌಕಿಕ ಆದೇಶ ನೀಡಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು.

”ಸಿ.ಟಿ ರವಿ ಅವರು ನನ್ನ ಮೇಲೂ ರೌಡಿ ಶೀಟರ್ ಇತ್ತು ಎಂದು ಒಪ್ಪಿಕೊಂಡಿದ್ದಾರೆ. ಸಿ.ಟಿ ರವಿ ಅವರ ಮೇಲೆ 8 ಜೂನ್ 2012ರಲ್ಲಿ ಐಟಿ ರೈಡ್ ಆಗಿತ್ತು. ಆರ್ ಟಿಐ ಕಾರ್ಯಕರ್ತ ಎ.ಸಿ ಕುಮಾರ್ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿ, 2004ರಲ್ಲಿ ಚುನಾವಣಾ ಆಯೋಗಕ್ಕೆ ರವಿ ಅವರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಒಟ್ಟು ಆಸ್ತಿ 10.1 ಲಕ್ಷ ರೂ. ಹಾಗೂ 1.2 ಲಕ್ಷ ರೂ. ವಾರ್ಷಿಕ ಆದಾಯ ಎಂದು ನಮೂದಿಸಲಾಗಿತ್ತು. ಆದರೆ 2012ರ ಅಫಿಡವಿಟ್ ನಲ್ಲಿ ಇವರ ಆದಾಯ 50 ಕೋಟಿ ಘೋಷಣೆ ಮಾಡಿದ್ದಾರೆ ಎಂದು ದೂರು ನೀಡಿದ್ದಾಗ ಐಟಿ ದಾಳಿ ಆಗಿತ್ತು. ಈಗ ನಮ್ಮ ಪ್ರಕಾರ ಸಿ.ಟಿ ರವಿ ಅವರು ಬೇನಾಮಿ ಹೇಸರಲ್ಲಿ 3 ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ” ಎಂದು ಕಿಡಿಕಾರಿದರು.

”ಇವರು ಮಾತೆತ್ತಿದರೆ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡುತ್ತಾರೆ. ಶಿವಕುಮಾರ್ ಅವರು ಉದ್ಯಮಿಗಳು, ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಅವರು ತಮ್ಮ ಆದಾಯ ಎಲ್ಲವನ್ನು ಐಟಿಗೆ ಸಲ್ಲಿಕೆ ಮಾಡಿದ್ದಾರೆ. ಆದರೆ ಸತ್ಯ ಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುವ ಸೈತಾನ್ ರವಿ ಅವರೇ, ನಿಮ್ಮ ಆದಾಯದ ಮೂಲವೇನು? ” ಎಂದು ಪ್ರಶ್ನೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!