5 ವರ್ಷದ ಮಗನಿಗೆ ಇರಿದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ- ಮಗು ಗಂಭೀರ
ಭೋಪಾಲ್ ಡಿ.7 : ತನ್ನ ಐದು ವರ್ಷದ ಮಗನಿಗೆ ಇರಿದು ತಂದೆಯೋರ್ವ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭೋಪಾಲ್ ನ ಚೋಳಾ ಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ.
ವೀರು ಮಾಳವೀಯ (25) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ 5 ವರ್ಷದ ಮಗು ಸಂದೀಪ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಗು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಈತ ತನ್ನ ಪತ್ನಿ ಹಾಗೂ ಮಗ ಸಂದೀಪ್ ನೊಂದಿಗೆ ಬಾಡಿಗೆ ಫ್ಲ್ಯಾಟ್ ನಲ್ಲಿ ವಾಸವಿದ್ದ. ಆದರೆ ಪತಿಯೊಂದಿಗೆ ಜಗಳವಾಡಿದ್ದ ಪತ್ನಿ ನಾಲ್ಕು ದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದಳು ಎನ್ನಲಾಗಿದ್ದು,ಪಿಪಲಾನಿಯಲ್ಲಿದ್ದ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ಸೋಮವಾರ ರಾತ್ರಿ 9.30ರ ಸುಮಾರಿಗೆ ಪತ್ನಿಗೆ ದೂರವಾಣಿ ಕರೆ ಮಾಡಿದ ವೀರು, ತಕ್ಷಣ ಮನೆಗೆ ವಾಪಸ್ಸಾಗದಿದ್ದರೆ ಮಗನನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.ಮಗನ ರಕ್ಷಣೆಗಾಗಿ ಪಿಪಲಾನಿಯಲ್ಲಿದ್ದ ತನ್ನ ಮನೆಯಿಂದ ಮಹಿಳೆ ಧಾವಿಸಿದಾಗ, ಪತಿ ನೇಣಿಗೆ ಶರಣಾಗಿರುವುದು ಕಂಡುಬಂದಿತು. ಪುಟ್ಟ ಮಗುವಿನ ಕತ್ತು ಮತ್ತು ಬೆನ್ನಿನಲ್ಲಿ ಇರಿತದ ಗಂಭೀರ ಗಾಯಗಳಿದ್ದವು. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮಾಧ್ಯಮ ವರದಯಿಂದ ತಿಳಿದು ಬಂದಿದೆ.