ಸಿಟಿ ಬಸ್ ಚಾಲಕನಿಗೆ ಹೃದಯಾಘಾತ- ಹಲವು ವಾಹನಗಳಿಗೆ ಬಸ್ ಡಿಕ್ಕಿ, ಇಬ್ಬರು ಮೃತ್ಯು
ಜಬಲ್‌ಪುರ (ಮಧ್ಯಪ್ರದೇಶ): ಚಲಿಸುತ್ತಿದ್ದ ಬಸ್ ನ ಚಾಲಕ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಬಸ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಮಧ್ಯಪ್ರದೇಶದ ಜಬಲ್‌ಪುರದ ಟ್ರಾಫಿಕ್ ಸಿಗ್ನಲ್‌ನಲ್ಲಿ ನಡೆದಿದೆ.
ಚಾಲಕನಿಲ್ಲದೆ ನಿಯಂತ್ರಣ ತಪ್ಪಿದ ಬಸ್, ರಿಕ್ಷಾ ಹಾಗೂ ಬೈಕ್ ಮೇಲೆ ಹರಿದಿದ್ದರಿಂದ ಓರ್ವ ಮೃತಪಟ್ಟಿದ್ದಾರೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ. ಬಸ್ ನ ಪ್ರಯಾಣಿಕರು ಹಾಗೂ ಇ-ರಿಕ್ಷಾದಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಹಾಗೂ ಬಸ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ವೃದ್ದರೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ಹರ್ದೇವ್ ಪಾಲ್(60 ವರ್ಷ) ಒಂದು ದಶಕದಿಂದ ಸಿಟಿ ಮೆಟ್ರೋ ಬಸ್ ಸರ್ವಿಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಹಠಾತ್ ಹೃದಯ ಸ್ತಂಭನವು ಅವರ ಸಾವಿಗೆ ಕಾರಣವಾಯಿತು ಹಾಗೂ ಚಾಲಕ ಸ್ಟೀರಿಂಗ್ ಮೇಲೆ ಬಿದ್ದ ಕಾರಣ ಈ ದುರಂತ ಸಂಭವಿಸಿದೆ. ಆದರೆ ಬಸ್ ನಿಧಾನವಾಗಿ ಚಲಿಸುತ್ತಿದ್ದ ಕಾರಣ ದೊಡ್ಡ ಅವಘಡ ತಪ್ಪಿದಂತಾಗಿದೆ ಎಂದು ತಿಳಿದು ಬಂದಿದೆ.