ಇನ್ನು ಮುಂದೆ 9 ಮತ್ತು 10ನೇ ತರಗತಿಗಳು ಪ್ರೌಢ ಶಾಲೆಗಳಲ್ಲ : ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು ನ.25 : ಇನ್ನು ಮುಂದೆ 9 ಮತ್ತು 10 ನೇ ತರಗತಿಯನ್ನು ಪ್ರೌಢ ಶಾಲೆಗಳು ಎಂದು ಕರೆಯದೇ ಪ್ರಾಥಮಿಕ ಶಿಕ್ಷಣದ ಮುಂದುವರಿದ ಶಿಕ್ಷಣ ಎಂದು ಪರಿಗಣಿಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೇಳಿದೆ.

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಜ್ಞಾಪಕ ಪತ್ರವನ್ನು ಹೊರಡಿಸಿದ್ದು, ಇದರಲ್ಲಿ 9 ಮತ್ತು 10ನೇ ತರಗತಿಗಳು ಇನ್ನು ಮುಂದೆ ಪ್ರೌಢಶಿಕ್ಷಣದ ತರಗತಿಗಳಲ್ಲ. ಪ್ರಾಥಮಿಕ ಶಿಕ್ಷಣದ ಭಾಗವಾಗಲಿವೆ ಎಂದು ಹೇಳಿದೆ. ಹಾಗೂ ಕರ್ನಾಟಕ ಶಿಕ್ಷಣ ಸಂಸ್ಥೆಗಳ, (ವರ್ಗಿಕರಣ, ನಿಯಂತ್ರಣ, ಪಠ್ಯಕ್ರಮ ಮತ್ತು ಇತರೆ) ನಿಯಮ 1995 ತಿದ್ದುಪಡಿ ನಿಯಮ-2022 ರಲ್ಲಿ ಈ ನಿಯಮದ ಅನ್ವಯ ನೋಂದಣಿ ಮತ್ತು ಮಾನ್ಯತೆಗೆ ಮಾತ್ರ 9 ಮತ್ತು 10ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣದ ಮುಂದುವರೆದ ಶಿಕ್ಷಣ ಎಂದು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದೆ.

ಆದ್ದರಿಂದ ಇನ್ನು ಮುಂದೆ ಈಗಾಗಲೇ 1 ರಿಂದ 8 ಅಥವಾ 6 ರಿಂದ 8 ನೇ ತರಗತಿಗಳು ನಡೆಯುತ್ತಿರುವ ಶಾಲಾ ಆವರಣದಲ್ಲಿ 9 ಮತ್ತು 10ನೇ ತರಗತಿಯನ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ಮುಂದುವರೆದ ಶಾಲೆ ಎಂದು ಪರಿಗಣಿಸತಕ್ಕದ್ದು. ಅದರ ಅನ್ವಯ ನೋಂದಣಿ ನಿಯಮಗಳ ಅನುಸಾರ ಕ್ರಮವಹಿಸತಕ್ಕದ್ದು ಎಂದು ಆದೇಶಿಸಿದೆ. ಹಾಗೂ ಪ್ರಾಥಮಿಕ ಶಾಲೆಗಳಿರುವಲ್ಲಿಯೇ 9 ಮತ್ತು 10ನೇ ತರಗತಿಗಳನ್ನು ನಡೆಸುವುದಿದ್ದರೆ ಈ ತರಗತಿಗಳನ್ನು ಹೊಸ ಶಾಲೆ ಎಂದು ಪರಿಗಣಿಸಬಾರದು ಎಂದು ಇಲಾಖೆಯು ಸ್ಪಷ್ಟವಾಗಿ ಸೂಚಿಸಿದೆ.

ಒಂದು ವೇಳೆ ಬೇರೆ ಆವರಣದಲ್ಲಿ 9 ಮತ್ತು 10ನೇ ತರಗತಿಗಳನ್ನು ಪ್ರತ್ಯೇಕವಾಗಿ ಆರಂಭಿಸಿದ್ದಲ್ಲಿ ಮಾತ್ರ ಅಂತಹ ಶಾಲೆಯನ್ನು ಪ್ರೌಢ ಶಾಲೆಯೆಂದು ಪರಿಗಣಿಸಬೇಕು ಎಂದು ತಿಳಿಸಿದೆ. ಖಾಸಗಿ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

Leave a Reply

Your email address will not be published.

error: Content is protected !!