ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮಾಜಿ ಶಾಸಕ ಕುಸಿದು ಬಿದ್ದು ಮೃತ್ಯು
ಬೆಂಗಳೂರು ನ.25 : ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಬಂದಿದ್ದ ರೋಣ-ಗದಗ ಕ್ಷೇತ್ರದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ವರ್ತೂರಿನ ಪ್ರಷ್ಠಿ ವಿಲೇಜ್ ನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಶ್ರೀಶೈಲಪ್ಪ ಅವರು ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
25-06-1962 ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದಲ್ಲಿ ಜನಿಸಿದ್ದ ಶ್ರೀಶೈಲಪ್ಪ ಬಿದರೂರು ಅವರು, ಸೂಡಿಯ ಮಂಡಲ ಪಂಚಾಯತಿಯಿಂದ ರಾಜಕೀಯ ವೃತ್ತಿ ಆರಂಭಿಸಿದ್ದರು. ಹಾಗೂ ಇವರು ತಾಲೂಕು ಡೆವೆಲಪ್ಮೆಂಟ್ ಬೋರ್ಡ್ ಗೂ ಆಯ್ಕೆಯಾಗಿದ್ದರು. ಮೂಲತಃ ಜನತಾ ಪರಿವಾರದಿಂದ ಬಂದವರಾಗಿದ್ದರು. ಅವರೊಬ್ಬ ರಾಜಕೀಯ ಮುತ್ಸದ್ದಿಯಾಗಿದ್ದರು. ಶ್ರೀಶೈಲಪ್ಪ ಬಿದರೂರು ರೋಣ ಹಾಗೂ ಗದಗ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಗದಗ ಜಿಲ್ಲೆಯ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಶ್ರೀಶೈಲಪ್ಪ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಅವರು ಕಳೆದ ವಿಧಾನಸಭಾ ಚುನಟವಣೆಯಲ್ಲಿ ಟಿಕೆಟ್ ಸಿಗದಿದ್ದಕ್ಕೆ 2019ರಲ್ಲಿ ಕಾಂಗ್ರೆಸ್ ಸೇರಿದ್ದರು.
ಇನ್ನು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರ ನಿಧನದಿಂದಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಂದೂಡಿದ್ದಾರೆ, ನವೆಂಬರ್ 27ರಂದು ಜೂಮ್ ಮೂಲಕ ಸಭೆ ನಿಗದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.