ಬೆಸ್ಕಾಂ ಗ್ರಾಹಕರಿಗೆ ಬಿಗ್ ಶಾಕ್: 3 ತಿಂಗಳು ವಿದ್ಯುತ್ ಬಿಲ್ ಪಾವತಿಸಿಲ್ಲವೆಂದರೆ ನಿಮ್ಮ ಲೈಸೆನ್ಸ್ ರದ್ದು
ಬೆಂಗಳೂರು ನ.16 : 2 ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ವಿದ್ಯುತ್ ಬಿಲ್ ಕಟ್ಟುವ ಪದ್ಧತಿಯನ್ನು ರೂಢಿ ಮಾಡಿಕೊಂಡಿರುವವರಿಗೆ ಬಿಗ್ ಶಾಕ್ ನೀಡಲು ಬೆಸ್ಕಾಂ ಮುಂದಾಗಿದೆ.
ಈ ಹಿಂದೆ ಕಾರಣಾಂತರಗಳಿಂದ ಕೆಲ ತಿಂಗಳು ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದೇ ಇದ್ದಾಗ ಬೆಸ್ಕಾಂ ಅಧಿಕಾರಿಗಳು ಕರೆಂಟ್ ಫ್ಯೂಸ್ ತೆಗೆದು ಕೊಂಡು ಹೋಗುತ್ತಿದ್ದರು. ಆದರೆ ಇನ್ನು ಮುಂದೆ ವಿದ್ಯುತ್ ಬಿಲ್ ಕಟ್ಟಲು ವಿಳಂಬ ಮಾಡುವವರಿಗೆ ವಿದ್ಯುತ್ ಸಂಪರ್ಕದ ಲೈಸೆನ್ಸ್ ನ್ನು ರದ್ದು ಮಾಡಲು ಬೆಸ್ಕಾಂ ಮುಂದಾಗಿದೆ.
ವಿದ್ಯುತ್ ಬಾಕಿ ಬಿಲ್ ಸಂಗ್ರಹಕ್ಕೆ ಗ್ರಾಹಕರ ಮೇಲೆ ಹೊಸ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿರುವ ಬೆಸ್ಕಾಂ ನವರು, ಇನ್ಮುಂದೆ 3 ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲವೆಂದರೆ ಸಿಬ್ಬಂದಿ ಕರೆಂಟ್ ಫ್ಯೂಸ್ ತೆಗೆಯಲ್ಲ ಬದಲಾಗಿ ನಿಮ್ಮ ಮನೆಯ ವಿದ್ಯುತ್ ಸಂಪರ್ಕದ ಲೈಸೆನ್ಸ್ ನನ್ನೇ ರದ್ದು ಮಾಡ್ತಾರೆ. ಅದರಂತೆ ಇನ್ಮೇಲೆ 3 ತಿಂಗಳು ವಿದ್ಯುತ್ ಬಿಲ್ ಬಾಕಿ ಇದ್ದರೆ ವಿದ್ಯುತ್ ಸಂಪರ್ಕದ ಒಪ್ಪಂದವೇ ರದ್ದಾಗಲಿದೆ. ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಂಡರೆ ಪುನಃ ಅರ್ಜಿ ಸಲ್ಲಿಸಿ ಹೊಸ ಕನೆಕ್ಷನ್ ತೆಗೆದುಕೊಳ್ಳಲೇ ಬೇಕಾಗುತ್ತದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅವರು, ತಿಂಗಳಿಗೆ ಸರಿಯಾಗಿ ಬಿಲ್ ಪಾವತಿಸದೆ ನಿರ್ಲಕ್ಷ್ಯ ತೋರುವರರ ವಿರುದ್ಧ ಬೆಸ್ಕಾಂ ಸಮರ ಸಾರಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೂತನ ಪ್ರಯೋಗ ಮಾಡುತ್ತಿದೆ. ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಳಿಸುವಂತಹ ತೊಂದರೆ ಬೇಡ ಅಂದರೆ ಸರಿಯಾದ ಟೈಮ್ ಗೆ ವಿದ್ಯುತ್ ಬಿಲ್ ಕಟ್ಟಿ ಎಂದು ಸೂಚನೆ ನೀಡಿದ್ದಾರೆ.