ವಾಟ್ಸ್ ಆ್ಯಪ್ ನ ಹೊಸ ಫೀಚರ್…. ಸಂಪೂರ್ಣ ಮಾಹಿತಿ ಇಲ್ಲಿದೆ…
ನವದೆಹಲಿ ನ.15 : ಆಯಾ ಸಮಯಕ್ಕೆ ಹೊಸ ಹೊಸ ಪೀಚರ್ ಗಳನ್ನು ನೀಡುವ ಮೂಲಕ ಬಳಕೆದಾರರಿಗೆ ಉತ್ತಮ ವಾಟ್ಸ್ ಆ್ಯಪ್ ಬಳಕೆಯ ಅನುಭವ ನೀಡುತ್ತಿರುವ ವಾಟ್ಸ್ ಆ್ಯಪ್ ಇದೀಗ ಮತ್ತೊಂದು ಹೊಸ ಫೀಚರ್ ನ್ನು ನೀಡಿದೆ.
ಈ ಹೊಸ ಫೀಚರ್ ನ ಹೆಸರು ವಾಟ್ಸ್ ಆ್ಯಪ್ ಕಮ್ಯುನಿಟಿ.ವಾಟ್ಸ್ ಆ್ಯಪ್','ಫೇಸ್ಬುಕ್' ಒಡೆತನವನ್ನು ಹೊಂದಿರುವ ಮೆಟಾ'ಸಂಸ್ಥೆ-
ವಾಟ್ಸ್ ಆ್ಯಪ್ ಕಮ್ಯುನಿಟಿ’ ಎಂಬ ಹೊಸ ಫೀಚರ್ ಅನ್ನು ಬಳಕೆದಾರರಿಗೆ ಪರಿಚಯಿಸಿದೆ. ವಾಟ್ಸ್ ಆ್ಯಪ್ ರೂಪಿಸಿರುವ ಈ ಹೊಸ ಪ್ರಯೋಗವು ಒಂದು ವಿಚಾರಕ್ಕೆ ಸಂಬಂಧಿಸಿದ ವಾಟ್ಸ್ ಆ್ಯಪ್ ಗುಂಪುಗಳನ್ನು ಒಗ್ಗೂಡಿಸಲು ಇದು ಸೂಕ್ತವಾಗಬಹುದು. ವಾಟ್ಸ್ ಆ್ಯಪ್ ಗ್ರೂಪ್ಗಳ ಸದಸ್ಯರೊಂದಿಗೆ ಅಡ್ಮಿನ್ ಸುಲಭವಾಗಿ ಸಂವಹಿಸಲು ಸಾಧ್ಯವಾಗುತ್ತದೆ. ಹಾಗೂ 20 ವಾಟ್ಸ್ ಆ್ಯಪ್ ಗ್ರೂಪ್ಗಳನ್ನು ಒಂದೇ ವೇದಿಕೆಯಡಿ ತರಬಹುದಾದ ಅವಕಾಶ ಇದು ನೀಡುತ್ತದೆ.
ಆರಂಭದಲ್ಲಿ ವಾಟ್ಸ್ ಆ್ಯಪ್ ನಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂವಹನ ನಡೆಸಬಹುದಾದ ಸಾಮಾನ್ಯ ಫೀಚರ್ ಇತ್ತು. ಆದಾದ ಬಳಿಕ ಗುಂಪು (ವಾಟ್ಸ್ ಆ್ಯಪ್ ಗ್ರೂಪ್) ಸಂವಹನದ ಮೂಲಕ ಏಕಕಾಲಕ್ಕೆ ನಿರ್ಧಿಷ್ಟ ಸದಸ್ಯರನ್ನು ತಲುಪಬಹುದಾದ ಹೊಸ ಫೀಚರ್ ನ್ನು ನೀಡಿತ್ತು. ಇದರ ಜೊತೆಗೆ ಇತ್ತೀಚಿನ ಕೆಲ ವರ್ಷಗಳ ಹಿಂದೆ ಬ್ರಾಡ್ಕಾಸ್ಟ್ ಎಂಬ ಹೊಸ ಫೀಚರ್ ಮೂಲಕ ಗುಂಪಿನಲ್ಲಿ (ಗ್ರೂಪ್) ಒಳಗೊಳ್ಳದೇ ಏಕಕಾಲಕ್ಕೆ ಹಲವು ಮಂದಿಗೆ ಸಂದೇಶ ಕಳುಹಿಸಬಹುದಾದ ಮತ್ತೊಂದು ಹೊಸ ಫೀಚರ್ ನ್ನು ವಾಟ್ಸ್ ಆ್ಯಪ್ ನೀಡಿತ್ತು. ಇದೆಲ್ಲದರ ನಡುವೆ ಇತ್ತೀಚೆಗೆ ವಾಟ್ಸ್ ಆ್ಯಪ್ ಗ್ರೂಪ್ ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸ ಬಹುದಾದ ಹೊಸ ಫೀಚರ್ ಕೂಡಾ ಬಳಕೆದಾರರಿಗಾಗಿ ವಾಟ್ಸ್ ಆ್ಯಪ್ ನೀಡಿತ್ತು. ಇದೀಗ `ವಾಸ್ಟ್ ಆ್ಯಪ್ ಕಮ್ಯೂನಿಟಿ’ ಎಂಬ ನೂತನ ಫೀಚರ್ ಮೂಲಕ ವಾಟ್ಸ್ ಆ್ಯಪ್ ಗ್ರೂಪ್ ಗಳನ್ನು ಒಗ್ಗೂಡಿಸುವ ಅಂದರೆ ವಾಟ್ಸ್ ಆ್ಯಪ್ ಗ್ರೂಪ್ ಗಳ ಗ್ರೂಪ್ ಎನ್ನಬಹುದಾದ ಹೊಸ ಫೀಚರ್ ನ್ನು ನೀಡಿದೆ.
ಕಮ್ಯುನಿಟಿಯನ್ನು ರಚಿಸುವುದು ಹೇಗೆ….?
ವಾಟ್ಸ್ ಆ್ಯಪ್ ಕಮ್ಯುನಿಟಿಯನ್ನು ರಚಿಸಲು, ಬಳಕೆದಾರರು ‘ಕಮ್ಯುನಿಟಿ’ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕು. (ಈ ಟ್ಯಾಬ್ ನಿಮ್ಮ ಮೊಬೈಲ್ನ ಎಡಭಾಗದ ಮೇಲ್ಭಾಗದಲ್ಲಿ ಇರುತ್ತದೆ.) ‘ನ್ಯೂ ಕಮ್ಯನಿಟಿ’ ಬಟನ್ ಅನ್ನು ಟ್ಯಾಪ್ ಮಾಡಬೇಕು. ನಿಮ್ಮ ಕಮ್ಯುನಿಟಿಯ ಪ್ರೊಫೈಲ್ ಚಿತ್ರ ಹಾಕಬಹುದು. ನಿಮ್ಮ ಕಮ್ಯುನಿಟಿಗೆ ಹೆಸರನ್ನು ನೀಡಬೇಕು. ಕಮ್ಯುನಿಟಿ ಡಿಸ್ಕ್ರಿಪ್ಶನ್ನಲ್ಲಿ ನೀವು ಮಾಡುತ್ತಿರುವ ಕಮ್ಯುನಿಟಿಯ ಗುರಿ, ಧ್ಯೇಯೋದ್ದೇಶವನ್ನು ಬರೆಯಬೇಕು. ನಂತರ ಬಾಣದ ಗುರುತನ್ನು ಕ್ಲಿಕ್ ಮಾಡಬೇಕು. ನಂತರ ಕಮ್ಯನಿಟಿ ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ಹೊಸ ಗ್ರೂಪ್ಗಳನ್ನು ರಚಿಸಬಹುದು. ಅಥವಾ ಈಗಾಗಲೇ ನೀವು ಅಡ್ಮಿನ್ ಆಗಿರುವ ಗ್ರೂಪ್ಗಳನ್ನು ಅದರಲ್ಲಿ ಸೇರಿಸಬಹುದು. ಆನಂತರ ಕೆಳಗಿನ ರೈಟ್ ಬಟನ್ ಒತ್ತಿದರೆ ನಿಮ್ಮ ಕಮ್ಯುನಿಟಿ ಗ್ರೂಪ್ ರಚನೆಯಾಗುತ್ತದೆ. ಕಮ್ಯನಿಟಿ ಗ್ರೂಪ್ ರಚನೆಯಾದ ಬಳಿಕ ಅಲ್ಲಿ ನಿಮ್ಮ ಸಂದೇಶವನ್ನು ಹಾಕಬಹುದು ಅಂದರೆ ಕಮ್ಯುನಿಟಿ ಅಡ್ಮಿನ್ ತಮ್ಮ ಅನೌನ್ಸ್ಮೆಂಟ್ಗಳನ್ನು (ಘೋಷಣೆಗಳನ್ನು) ಕಳುಹಿಸಬಹುದು.
ಕಮ್ಯುನಿಟಿ ಅಡ್ಮಿನ್ ಇಲ್ಲಿನ ಎಲ್ಲಾ ಪ್ರತ್ಯೇಕ ಗುಂಪುಗಳಿಗೆ ಸಂದೇಶ ಕಳುಹಿಸಬಹುದು. ಎಲ್ಲಾ ಗುಂಪಿನಲ್ಲಿರುವ ಎಲ್ಲ ಸದಸ್ಯರಿಗೆ ಏಕಕಾಲದಲ್ಲಿ ಸಂದೇಶ ಕಳುಹಿಸಲು ಸಾಧ್ಯವಾಗುತ್ತದೆ. ಮೀಡಿಯಾ ಫೈಲ್ಗಳು, ಡಾಕ್ಯುಮೆಂಟ್ಗಳು ಮತ್ತು ಧ್ವನಿ ಸಂದೇಶಗಳನ್ನು ರವಾನಿಸಬಹುದು. ಕಮ್ಯುನಿಟಿ ಗ್ರೂಪ್ಗಳು ಒಂದು ರೀತಿಯಲ್ಲಿ ಬ್ರಾಂಡ್ ಕಾಸ್ಟ್ ರೀತಿಯಲ್ಲಿ ಕೆಲಸ ನಿರ್ವಹಿಸುತ್ತವೆ. ಒಬ್ಬ ವ್ಯಕ್ತಿಯು ಒಮ್ಮೆಲೇ ಹತ್ತಾರು ಜನಕ್ಕೆ ಸಂದೇಶ ಕಳುಹಿಸುತ್ತಿದ್ದ ರೀತಿಯಲ್ಲಿಯೇ ಒಬ್ಬ ಅಡ್ಮಿನ್ ಈಗ ಇಪ್ಪತ್ತು ಗ್ರೂಪ್ಗಳಲ್ಲಿನ ವಾಟ್ಸ್ಅಪ್ ಬಳಕೆದಾರರಿಗೆ ಒಮ್ಮೆಲೆ ಪ್ರತ್ಯೇಕ ಸಂದೇಶಗಳನ್ನು ಕಳಹಿಸಬಹುದಾಗಿದೆ. ಆದರೆ ಸಂದೇಶವು ನೀವು ರಚಿಸಿರುವ ಕಮ್ಯುನಿಟಿಯ ಹೆಸರಿನಲ್ಲಿ ರವಾನೆಯಾಗುತ್ತದೆ. ಉದಾಹರಣೆಗೆ- ನೀವು ‘ಸೆಕ್ಯುಲರ್’ ಎಂಬ ಕಮ್ಯುನಿಟಿಯನ್ನು ರಚಿಸಿ, ಇದೇ ಆಲೋಚನೆಯ 20 ಗುಂಪುಗಳನ್ನು ಸೇರಿಸಿದ್ದೀರಿ ಎಂದುಕೊಳ್ಳಿ. ಅಡ್ಮಿನ್ ಆದ ನೀವು ‘ಸೆಕ್ಯುಲರ್’ ಕಮ್ಯುನಿಟಿಯಲ್ಲಿ ಒಂದು ‘ಅನೌನ್ಸ್ಮೆಂಟ್’ (ಸಂದೇಶ) ಹಾಕಿದರೆ, ‘ಸೆಕ್ಯುಲರ್’ ಕಮ್ಯುನಿಟಿಯಲ್ಲಿರುವ ಪ್ರತಿ ಬಳಕೆದಾರನಿಗೆ ಪ್ರತ್ಯೇಕವಾಗಿ ಸಂದೇಶ ರವಾನೆಯಾಗುತ್ತದೆ. ಆದರೆ ನಿಮ್ಮ ಸಂದೇಶ, ನಿಮ್ಮ ‘ಸೆಕ್ಯುಲರ್’ ಕಮ್ಯುನಿಟಿಯಲ್ಲಿನ ಇಪ್ಪತ್ತು ಗ್ರೂಪ್ಗಳಿಗೆ ಪ್ರತ್ಯೇಕವಾಗಿ ರವಾನೆಯಾಗುವುದಿಲ್ಲ. ‘ಸೆಕ್ಯುಲರ್’ ಹೆಸರಿನ ‘ಕಮ್ಯುನಿಟಿ’ ಗ್ರೂಪ್ ಮೆಸೇಜ್ ಇದಾಗಿರುತ್ತದೆ.
ಇನ್ನು ಕಮ್ಯೂನಿಟಿಯಲ್ಲಿ ಅಡ್ಮಿನ್ ಆದವರು, ಇತರ ಜನರನ್ನು ಕಮ್ಯುನಿಟಿಗೆ ಸೇರಲು ಆಹ್ವಾನಿಸಹುದು. ಅದಕ್ಕಾಗಿ ನೀವು ಕಮ್ಯುನಿಟಿಯ ಲಿಂಕ್ ಅನ್ನು ಸಹ ಹಂಚಿಕೊಳ್ಳಬಹುದು. ಬಳಕೆದಾರರು ನಂತರ ಕಮ್ಯುನಿಟಿಯ ಭಾಗವಾಗಲು ಲಿಂಕ್ ಅನ್ನು ಅನುಸರಿಸಬಹುದು. ಆದರೆ ಕಮ್ಯುನಿಟಿಯಲ್ಲಿರುವ ಗ್ರೂಪ್ಗಳಲ್ಲಿ ಒಬ್ಬ ವ್ಯಕ್ತಿ ಸೇರಬೇಕೆಂದರೆ, ಆ ಗ್ರೂಪ್ನ ಅಡ್ಮಿನ್ಗೆ ರಿಕ್ವೆಸ್ಟ್ ಕಳುಹಿಸಬೇಕಾಗುತ್ತದೆ. ಗ್ರೂಪ್ಗಳ ಅಡ್ಮಿನ್ಗಳು ಅನುಮತಿಸಿದರೆ ಮಾತ್ರ ಗ್ರೂಪ್ನೊಳಗೆ ಪ್ರವೇಶಿಸಬಹುದು. ಹಾಗೂ ಕಮ್ಯುನಿಟಿಗೆ ಸಂಬಂಧಪಡದವರು ಯಾರಾದರೂ ಇದ್ದರೆ ಅವರನ್ನು ಸುಲಭವಾಗಿ ರಿಮೂವ್ ಮಾಡಬಹುದು. ಕಮ್ಯುನಿಟಿಯಿಂದ ರಿಮೂವ್ ಮಾಡಿದರೂ ನಿರ್ದಿಷ್ಟ ಗ್ರೂಪ್ನಲ್ಲಿರುವ ಆ ವ್ಯಕ್ತಿ, ಆ ಗ್ರೂಪ್ನಲ್ಲಿ ಸದಸ್ಯನಾಗಿಯೇ ಇರುತ್ತಾನೆ. ಕಮ್ಯುನಿಟಿಯಿಂದ ನಿರ್ದಿಷ್ಟ ಬಳಕೆದಾರರನ್ನು ರಿಮೂವ್ ಮಾಡಲು ಕಮ್ಯುನಿಟಿಯ ಮುಖ್ಯ ಪುಟಕ್ಕೆ ಹೋಗಬೇಕು. ಸದಸ್ಯರ ಪಟ್ಟಿಯನ್ನು ವೀಕ್ಷಿಸಬೇಕು. ನೀವು ಎಲ್ಲಾ ಗುಂಪುಗಳ ಎಲ್ಲಾ ಸದಸ್ಯರ ಪಟ್ಟಿಯನ್ನು ಒಂದೇ ಕಡೆ ನೋಡುತ್ತೀರಿ. ಕಮ್ಯುನಿಟಿಯಿಂದ ನಿರ್ದಿಷ್ಟ ವ್ಯಕ್ತಿಯನ್ನು ತೆಗೆದುಹಾಕಬಹುದು. ಇಷ್ಟವಿಲ್ಲದವರು ಕಮ್ಯುನಿಟಿಯಿಂದ ಲೆಪ್ಟ್ ಕೂಡ ಆಗಲೂ ಅವಕಾಶವಿದೆ.
ಗುಂಪುಗಳು ಮತ್ತು ಕಮ್ಯುನಿಟಿ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಗಾತ್ರ. `ಬೀಬಮ್’ ವೆಬ್ಸೈಟ್ ಪ್ರಕಾರ, “ಸದ್ಯಕ್ಕೆ ನೀವು ಒಂದು ವಾಟ್ಸ್ ಆ್ಯಪ್ ಗುಂಪಿಗೆ 512 ಮಂದಿಯನ್ನು ಆಹ್ವಾನಿಸಬಹುದು. ಆದಾಗ್ಯೂ ಈ ಮಿತಿಯನ್ನು ಮುಂಬರುವ ದಿನಗಳಲ್ಲಿ 1,024 ಮಂದಿಗೆ ಹೆಚ್ಚಿಸಲು ಸಾಧ್ಯತೆ ಇದೆ. ಮತ್ತೊಂದೆಡೆ, ಒಂದೇ ವಾಟ್ಸ್ ಆ್ಯಪ್ ಕಮ್ಯುನಿಟಿಯಲ್ಲಿ ಮುಂದಿನ ದಿನಗಳಲ್ಲಿ 21 ಗ್ರೂಪ್ಗಳನ್ನು ಸೇರಿಸಬಹುದು. ಲೆಕ್ಕ ಹಾಕಿದರೆ ಒಂದು ಕಮ್ಯುನಿಟಿಯಲ್ಲಿ 21,504 ಬಳಕೆದಾರರು ಇರಲು ಸಾಧ್ಯವಾಗಬಹುದು.”