ಕ್ರೈಸ್ತ-ಇಸ್ಲಾಂಗೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ಇಲ್ಲ : ಕೇಂದ್ರ ಸರಕಾರ

ನವದೆಹಲಿ ನ.11 : ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರವಾದ ದಲಿತರಿಗೆಪರಿಶಿಷ್ಟ ಜಾತಿ’ಯ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‍ಗೆ ಹೇಳಿದೆ

ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕು ಎಂದು ಕೋರಿ ಸಿಪಿಐಎಲ್ ಎಂಬ ಸ್ವಯಂಸೇವಾ ಸಂಸ್ಥೆ ಅರ್ಜಿ (ಪಿಐಎಲ್) ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಪೀಠವು, ನಿಲುವು ಸ್ಪಷ್ಟಪಡಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ‘ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರವಾದ ದಲಿತರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಪರಿಶೀಲಿಸಲು ಆಯೋಗ ರಚಿಸುತ್ತೇವೆ’ ಎಂದು ಸರ್ಕಾರವು ಹಿಂದಿನ ವಿಚಾರಣೆ ವೇಳೆ ಪೀಠಕ್ಕೆ ಮಾಹಿತಿ ನೀಡಿತ್ತು. ಆನಂತರ ಸುಪ್ರೀಂ ಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಆಯೋಗವು ವರದಿಯನ್ನು ಇನ್ನಷ್ಟೇ ಸಲ್ಲಿಸಬೇಕಿದೆ. ಆದರೆ ಅದಕ್ಕೂ ಮುನ್ನವೇ, ಸರ್ಕಾರವು ಈ ಸಂಬಂಧ ಸುಪ್ರೀಂ ಕೋರ್ಟ್‍ಗೆ ಬುಧವಾರ ಪ್ರಮಾಣ ಪತ್ರ ಸಲ್ಲಿಸಿದೆ.

‘1950ರ ಸಂವಿಧಾನ (ಪರಿಶಿಷ್ಟ ಜಾತಿ) ಆದೇಶದ ಪ್ರಕಾರ ಪರಿಶಿಷ್ಟ ಜಾತಿಯ ಜನರು ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮದಲ್ಲಿ ಇದ್ದರೆ ಮಾತ್ರ ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬಹುದು. ವಿದೇಶಿ ಧರ್ಮಗಳಾದ ಕ್ರೈಸ್ತ ಮತ್ತು ಇಸ್ಲಾಂಗೆ ಮತಾಂತರವಾದ ದಲಿತರಿಗೆ ಈ ಸ್ಥಾನಮಾನ ಮತ್ತು ಮೀಸಲಾತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ’ ಹಾಗೂ ಇವರಿಗೆ ಮೀಸಲಾತಿ ನೀಡಿದರೆ, ಹಿಂದೂ ಧರ್ಮದಲ್ಲಿರುವ ಪರಿಶಿಷ್ಟ ಜಾತಿಯ ಜನರ ಹಕ್ಕಿಗೆ ಧಕ್ಕೆಯಾಗುತ್ತದೆ’ ಎಂದು ಸರ್ಕಾರವು ಪ್ರಮಾಣಪತ್ರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿದೆ ಎಂದು ತಿಳಿದು ಬಂದಿದೆ.

‘ಕ್ರೈಸ್ತ ಮತ್ತು ಇಸ್ಲಾಂನಲ್ಲಿ ಅಸ್ಪೃಶ್ಯತೆಯಂತಹ ದಬ್ಬಾಳಿಕೆಗಳು ಇಲ್ಲ ಎಂಬುದನ್ನು 1950ರ ಸಂವಿಧಾನ (ಪರಿಶಿಷ್ಟ ಜಾತಿ) ಆದೇಶವು ಈಗಾಗಲೇ ಸಾಬೀತು ಮಾಡಿದೆ. ಆ ಎರಡೂ ಧರ್ಮಗಳಲ್ಲಿ ಅಸ್ಪøಶ್ಯತೆಯಂತಹ ಆಚರಣೆಗಳು ಇಲ್ಲ ಎಂಬ ಕಾರಣಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಜನರು ಆ ಧರ್ಮಗಳಿಗೆ ಮತಾಂತರವಾಗಿದ್ದಾರೆ. ಅಲ್ಲಿ ಅವರು ಅಂತಹ ದೌರ್ಜನ್ಯಕ್ಕೆ ಒಳಗಾಗುತ್ತಿಲ್ಲ. ಈ ಕಾರಣದಿಂದ ಅವರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ಮತ್ತು ಮೀಸಲಾತಿ ನೀಡಲು ಸಾಧ್ಯವಿಲ್ಲ’ ಎಂದು ಸರ್ಕಾರವು ಪ್ರಮಾಣ ಪತ್ರದಲ್ಲಿ ಹೇಳಿದೆ.

ಹಾಗೂ `ಕೆಲವು ಸಾಮಾಜಿಕ ಆಚರಣೆಗಳ ಕಾರಣದಿಂದ 1956ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕರೆಯ ಮೇರೆಗೆ ಪರಿಶಿಷ್ಟ ಜಾತಿಯ ಜನರು ಬೌದ್ಧ ಧರ್ಮಕ್ಕೆ ಮತಾಂತರವಾದರು. ಹೀಗೆ ಮತಾಂತರವಾದವರ ಮೂಲ ಜಾತಿ ಯಾವುದು ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಆದರೆ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರವಾದ ದಲಿತರ ಮೂಲ ಜಾತಿ ಪತ್ತೆ ಮಾಡಲು ಸಾಧ್ಯವಿಲ್ಲ. ಈ ಎರಡೂ ಧರ್ಮಗಳಿಗೆ ನಡೆಯುವ ಮತಾಂತರದ ಪ್ರಕ್ರಿಯೆಯೂ ಭಿನ್ನವಾದುದು. ಅಲ್ಲದೆ ಈ ಧರ್ಮಗಳಿಗೆ ಮತಾಂತರವೂ ಬೇರೆ ಬೇರೆ ಕಾರಣಗಳಿಗೆ ನಡೆಯುತ್ತದೆ’ ಎಂದು ಸರ್ಕಾರ ಹೇಳಿದೆ.

‘ಹಿಂದೂ ಧರ್ಮದಲ್ಲಿದ್ದಾಗ ಅನುಭವಿಸಿದ್ದಕ್ಕಿಂತ ಹೆಚ್ಚಿನ ದೌರ್ಜನ್ಯವನ್ನು ಕ್ರೈಸ್ತ ಮತ್ತು ಇಸ್ಲಾಂನಲ್ಲಿ ದಲಿತರು ಎದುರಿಸುತ್ತಿದ್ದಾರೆ ಎಂಬುದಕ್ಕೆ ದೃಢೀಕೃತ ಮಾಹಿತಿ ಮತ್ತು ಅಧ್ಯಯನ ಆಧರಿತ ದಾಖಲೆಗಳು ಲಭ್ಯವಿಲ್ಲ. ಎಲ್ಲಾ ಧರ್ಮದಲ್ಲಿರುವ ದಲಿತರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕು ಎಂದು ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಆಯೋಗದ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಯಾವುದೇ ಅಧ್ಯಯನ ನಡೆಸದೆಯೇ ಅಂತಹ ಶಿಫಾರಸು ಮಾಡಲಾಗಿತ್ತು. ಆ ವರದಿಯು ಲೋಪಗಳಿಂದ ಕೂಡಿತ್ತು. ವಸ್ತುಸ್ಥಿತಿ ಅಧ್ಯಯನ ಮಾಡದೆಯೇ ಎಲ್ಲರಿಗೂ ಮೀಸಲಾತಿ ನೀಡಿದರೆ, ಹಿಂದೂ ಧರ್ಮದಲ್ಲಿರುವ ಪರಿಶಿಷ್ಟ ಜಾತಿಯ ಜನರ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ’ ಎಂದು ಸರ್ಕಾರವು ತನ್ನ ಪ್ರಮಾಣ ಪತ್ರದಲ್ಲಿ ವಿವರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಇದೇ ನ.16ಕ್ಕೆ ಮುಂದೂಡಿದೆ ಎಂದೂ ತಿಳಿದು ಬಂದಿದೆ.

Leave a Reply

Your email address will not be published.

error: Content is protected !!