ದಂತ ವೈದ್ಯ ನಿಗೂಢ ಸಾವು : ಮುಸ್ಲಿಂ ಲೀಗ್ ನೇತಾರರ ಸಹಿತ ಐವರ ಬಂಧನ
ಕಾಸರಗೋಡು ನ.11 : ಬದಿಯಡ್ಕದ ದಂತ ವೈದ್ಯ ಡಾ. ಎಸ್. ಕೃಷ್ಣಮೂರ್ತಿರವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಂ ಲೀಗ್ ನೇತಾರರ ಸಹಿತ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತ್ ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತು ಪದಾಧಿಕಾರಿ ಮುಹಮ್ಮದ್ ಹನೀಫ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಬಂಧಿತ ಆರೋಪಿಗಳು.
ಕ್ಲಿನಿಕ್ ಗೆ ಬಂದಿದ್ದ ಮಹಿಳೆ ಜೊತೆ ವೈದ್ಯ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇಲೆ ಆರೋಪಿಗಳು ಮಂಗಳವಾರದಂದು ಕ್ಲಿನಿಕ್ ಗೆ ತೆರಳಿ ವೈದ್ಯರಿಗೆ ಬೆದರಿಕೆವೊಡ್ಡಿದ್ದರು ಎನ್ನಲಾಗಿದೆ. ಬೆದರಿಕೆ ಬಳಿಕ ಡಾ. ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು. ಈ ನಡುವೆ ಕಾಸರಗೋಡು ದಂತ ವೈದ್ಯರ ಸಂಘಟನೆ ನೇತೃತ್ವದಲ್ಲಿ ಕೃಷ್ಣ ಮೂರ್ತಿ ಅವರನ್ನು ಕೂಡಲೇ ಪತ್ತೆ ಹಚ್ಚುವಂತೆ ಆಗ್ರಹಿಸಿ ಬದಿಯಡ್ಕದಲ್ಲಿ ಧರಣಿ ನಡೆಸಿದ್ದರು. ನಂತರ ಕುಂದಾಪುರದ ರೈಲು ಹಳಿಯಲ್ಲಿ ವೈದ್ಯರ ಮೃತದೇಹ ಪತ್ತೆಯಾಗಿತ್ತು. ಕೃಷ್ಣಮೂರ್ತಿರವರ ಮೃತ ದೇಹವನ್ನು ಇಂದು ಮುಂಜಾನೆ ಬದಿಯಡ್ಕಕ್ಕೆ ತರಲಾಗಿತ್ತು. ಬಳಿಕ ಮನೆಯ ಹಿತ್ತಿಲಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ತಿಳಿದು ಬಂದಿದೆ.