ಸರ್ಕಾರದ ಲೋಪಗಳ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು: ಕಾಂಗ್ರೆಸ್ ಆಗ್ರಹ
ಬೆಂಗಳೂರು ನ.11 : ಬಿಜೆಪಿ ಸರ್ಕಾರದ ಲೋಪಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಈ ಬಗ್ಗೆ ಪ್ರಧಾನಿ ಅವರು ಉತ್ತರಿಸಬೇಕು ಎಂದು ಆಗ್ರಹಿಸಿದೆ.
ಈ ಬಗ್ಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು,`ರಾಜ್ಯ ಸರ್ಕಾರದ ವತಿಯಿಂದ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಉದ್ದೇಶಕ್ಕೆ 2 ಸಾವಿರ ಎಕರೆ ಜಮೀನು ನೀಡಲಾಗಿತ್ತು. ಹೀಗಾಗಿ, ಅಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಸರ್ಕಾರದ ಬದಲು ವಿಮಾನ ನಿಲ್ದಾಣದ ಆಡಳಿತ ಸಂಸ್ಥೆಯೇ ನಿರ್ಮಿಸಬಹುದಾಗಿತ್ತು. ಆದರೆ, ಸರ್ಕಾರದ ಹಣದಲ್ಲಿ ಪ್ರತಿಮೆ ಮಾಡಲಾಗಿದೆ’ ಎಂದರು.
‘ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದೂರು ನೀಡಿದ್ದಾರೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಂಡರೆ, ಹುಬ್ಬಳ್ಳಿಯ ಗುತ್ತಿಗೆದಾರ ಬಸವರಾಜ್ ದಯಾ ಮರಣ ಅರ್ಜಿ ಬರೆದಿದ್ದಾರೆ. ಈ ಬಗ್ಗೆ ಮೋದಿ ಉತ್ತರಿಸಬೇಕು’ ಎಂದು ಆಗ್ರಹಿಸಿದರು.
`ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆಯದೇ ವಚನಭ್ರಷ್ಟವಾಗಿದ್ದು, ಚುನಾವಣೆ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳಲ್ಲಿ ಶೇ 90ರಷ್ಟು ಈಡೇರಿಸಿಲ್ಲ. ಈ ಬಗ್ಗೆ ನಾವು ನಿತ್ಯ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದು, ಸರ್ಕಾರ ಯಾವುದಕ್ಕೂ ಉತ್ತರ ನೀಡಿಲ್ಲ. ಯಾವುದೇ ದಾಖಲಾತಿ ಇಲ್ಲದೆ ನಮ್ಮ ಸರ್ಕಾರವನ್ನು ಶೇ 10 ಕಮಿಷನ್ ಸರ್ಕಾರ ಎಂದು ಮೋದಿ ಗೂಬೆ ಕೂರಿಸಿದರು. ಅದನ್ನು ಸಾಬೀತುಪಡಿಸಲು ನಮ್ಮ ಮೇಲೆ ಯಾವುದೇ ತನಿಖೆ ಮಾಡಲಿಲ್ಲ’ ಎಂದರು.
‘ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಚುನಾವಣೆ ಸಮಯದಲ್ಲಿ ನಾನು ತಿನ್ನುವುದಿಲ್ಲ ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳಿದ್ದೀರಿ. ಈಗ ನಿಮ್ಮವರು ಏನು ತಿನ್ನುತ್ತಿದ್ದಾರೆ..? ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರೈತರಿಗೆ 1 ಲಕ್ಷದವರೆಗೂ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ನೀವು ಅದನ್ನು ಮಾಡಿಲ್ಲ. ರೈತರ ಆದಾಯ ಇಮ್ಮಡಿ ಆಗುವ ಬದಲು ರೈತರ ಕೃಷಿ ವೆಚ್ಚ ಇಮ್ಮಡಿ ಆಗಿದೆ. ಹತ್ತು ಹಲವು ವಿಚಾರಗಳನ್ನು ಪತ್ರದ ಮೂಲಕ ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದೇವೆ’ ಎಂದು ಹೇಳಿದರು.
ಪ್ರಧಾನಿಗೆ ಪ್ರತ್ಯೇಕ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ‘ನಾಲ್ಕು ವರ್ಷಗಳ ಹಿಂದೆ ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗ ನೀಡಿದ್ದ ಭರವಸೆಗಳು ಏನಾಗಿವೆ..? ಶೇ 40 ಕಮಿಷನ್ ಸರ್ಕಾರವೆಂಬ ಆರೋಪದ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ…? ಪಿಎಸ್ಐ ನೇಮಕಾತಿ ಹಗರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ. ಸಚಿವ ಎಸ್.ಟಿ. ಸೋಮಶೇಖರ್ ಮೇಲಿನ ಲಂಚ ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಸಚಿವ ಡಾ.ಕೆ. ಸುಧಾಕರ್, ಶಿವರಾಮ್ ಹೆಬ್ಬಾರ್, ಬಿ.ಸಿ. ಪಾಟೀಲ, ಕೆ. ಗೋಪಾಲಯ್ಯ, ಬೈರತಿ ಬಸವರಾಜ್, ಬಿ. ಶ್ರೀರಾಮುಲು, ಆನಂದ್ ಸಿಂಗ್, ಪ್ರಭು ಚೌಹಾಣ್ ಹೀಗೆ ಸಾಲು ಸಾಲು ಸಚಿವರ ಮೇಲೆ ಭ್ರಷ್ಟಾಚಾರ, ದುರಾಡಳಿತ, ಅಕ್ರಮಗಳ ಆರೋಪಗಳಿವೆ. ಆದರೆ, ನೀವು ಮೌನಕ್ಕೆ ಜಾರಿರುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ.