ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ: ಪ್ರಧಾನಿ ಮೋದಿ

ಬೆಂಗಳೂರು: ಇಂದು ಕರ್ನಾಟಕದ ಇಬ್ಬರು ಮಹನೀಯರ ಜನ್ಮಜಯಂತಿ, ಕನಕದಾಸ ಮತ್ತು ಒನಕೆ ಓಬವ್ವ ಅವರ ಜನ್ಮಜಯಂತಿಯಾಗಿದ್ದು ಈ ಶುಭ ಗಳಿಗೆಯಲ್ಲಿ ವಿಶ್ವದಲ್ಲಿ ಮನ್ನಣೆ ಗಳಿಸಿರುವ ಬೆಂಗಳೂರಿನಲ್ಲಿರುವುದು ನನಗೆ ಅತ್ಯಂತ ಸಂತಸ ತಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣ ಬಳಿ 108 ಅಡಿ ಎತ್ತರದ ಕೆಂಪೇಗೌಡ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಂದು ವಿಶೇಷ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ, ಇದು ನನ್ನ ಸೌಭಾಗ್ಯ, ಇಂದು ಎರಡು ವಿಶೇಷ ರೈಲುಗಳಿಗೆ ಚಾಲನೆ ನೀಡಲಾಗಿದೆ ಎಂದರು. ಇಂದು ಕನ್ನಡದಲ್ಲಿಯೇ ತಮ್ಮ ಮಾತುಗಳನ್ನು ಪ್ರಧಾನಿಯವರು ಪ್ರಾರಂಭಿಸಿದರು.

ಕೆಂಪೇಗೌಡರ ಪ್ರತಿಮೆ ಮತ್ತು ಜಲಾಭಿಷೇಕಕ್ಕೆ ನನಗೆ ಅವಕಾಶ ಸಿಕ್ಕಿದ್ದು ಪುಣ್ಯವಾಗಿದೆ. ಕರ್ನಾಟಕಕ್ಕೆ ವಂದೇ ಭಾರತ್ ರೈಲು ಸಿಕ್ಕಿದೆ. ಅದು ಸ್ವದೇಶಿ ನಿರ್ಮಿತ ರೈಲಾಗಿದೆ. ಕರ್ನಾಟಕಕ್ಕೆ ಮೇಡ್ ಇನ್ ಇಂಡಿಯಾ ರೈಲು ಸಿಕ್ಕಿದೆ. ಇದು ಸ್ಟಾರ್ಟ್ ಅಪ್ ನ್ನು ಪ್ರತಿನಿಧಿಸುತ್ತದೆ. ಇನ್ನು ಭಾರತ್ ಗೌರವ್ ದರ್ಶನ ರೈಲು ಈ ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಕನ್ನಡಿಗರಿಗೆ ಪರಿಚಯಿಸುತ್ತದೆ ಎಂದರು.

ವಿಜಯನಗರ ರಾಜರ ಕಾಲದಲ್ಲಿದ್ದ ಸುವರ್ಣ ಯುಗವನ್ನು ಬೆಂಗಳೂರಿಗರಿಗೆ ತೋರಿಸಿಕೊಟ್ಟ ದೂರದೃಷ್ಟಿಯ ನಾಡಪ್ರಭು ಕೆಂಪೇಗೌಡರು. ಇಂದು ಅವರ ಪ್ರತಿಮೆ ಅನಾವರಣಗೊಂಡಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ನಾಡಿನ ಕಲೆ, ಸಂಸ್ಕೃತಿ, ಪರಂಪರೆಗೆ ಗೌರವ ಕೊಟ್ಟಿದ್ದೇವೆ. ಅವರ ಚಿಂತನೆಯಲ್ಲಿ ನಾಡನ್ನು ಕಟ್ಟಲು ಸಂಕಲ್ಪ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Leave a Reply

Your email address will not be published.

error: Content is protected !!