ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗುತ್ತಿದ್ದರು – ಮುರುಘಾ ಶರಣರ ವಿರುದ್ಧದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ

ಚಿತ್ರದುರ್ಗ ನ.10 : ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯರನ್ನು ಪುಸಲಾಯಿಸಿ ರಾತ್ರಿ ವೇಳೆ ಬೆಡ್‍ರೂಂಗೆ ಕರೆಸಿಕೊಂಡು ಚಾಕೋಲೇಟ್ ರೂಪದ ಅಮಲು ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸಿ ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ, ಅಲ್ಲದೆ ಎಚ್ಚರವಾದ ಬಳಿಕ ಬೆದರಿಕೆ ಹಾಕುತ್ತಿದ್ದ ಬಗ್ಗೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದ್ದು, ಮಠದ ಆವರಣದಲ್ಲಿ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಶಿವಮೂರ್ತಿ ಮುರುಘಾ ಶರಣರು ಧಾರ್ಮಿಕ ಸಂಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ತನಿಖಾಧಿಕಾರಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಧಾರ್ಮಿಕ ಸಂಸ್ಥೆಯ ದುರ್ಬಳಕೆ ತಡೆ ಕಾಯ್ದೆಯ ಸೆಕ್ಷನ್- 3 (ಎಫ್) ಮತ್ತು ಸೆಕ್ಷನ್- 7ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದರ ಅಡಿಯಲ್ಲಿ ದೋಷಾರೋಪ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಅತ್ಯಾಚಾರ ಆರೋಪ, ಪೋಕ್ಸ್, ಎಸ್.ಸಿ ಮತ್ತು ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖೆಯನ್ನು ಪೊಲೀಸರು ಭಾಗಶಃ ಪೂರ್ಣಗೊಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು 84 ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಮಠದಲ್ಲಿ ಕೆಲಸ ಮಾಡುವವರು, ಶಿಕ್ಷಕಿಯರು, ಹಾಸ್ಟೆಲ್‍ನಲ್ಲಿ ವ್ಯಾಸಂಗ ಮಾಡಿದವರೂ ಸೇರಿದಂತೆ ಹಲವರು ತನಿಖೆಯ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಎಲ್ಲಾ ಸಾಕ್ಷಿಗಳ ಹೆಸರು ಸಹಿತ ವಿವರವನ್ನು ತನಿಖಾಧಿಕಾರಿ ದೋಷಾರೋಪಣ ಪಟ್ಟಿಯೊಂದಿಗೆ ನ್ಯಾಯಾಲಯಕ್ಕೆ ನೀಡಿದ್ದಾರೆ.

ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಅ.27ರಂದು ಎರಡು ದೋಷಾರೋಪ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇನ್ನು 331 ಹಾಗೂ 347 ಪುಟಗಳ ಎರಡು ಪ್ರತ್ಯೇಕ ದೋಷಾರೋಪಣ ಪಟ್ಟಿಯ ಬಗ್ಗೆ ನ್ಯಾಯಾಲಯ ಸ್ಪಷ್ಟನೆ ಕೇಳಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ತನಿಖಾಧಿಕಾರಿಯು ಸಂತ್ರಸ್ತ ಓರ್ವ ಬಾಲಕಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ವ್ಯಾಪ್ತಿಯಡಿ ಬರುವುದರಿಂದ ಪ್ರತ್ಯೇಕ ದೋಷಾರೋಪಣ ಪಟ್ಟಿ ಸಿದ್ಧಪಡಿಸಿದ್ದಾಗಿ ತನಿಖಾಧಿಕಾರಿಯು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿನಿಯರು ಐವರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ತನಿಖೆಯ ಸಂದರ್ಭದಲ್ಲಿ ಮೂವರ ಮೇಲಿನ ಆರೋಪಕ್ಕೆ ಪೂರಕ ಸಾಕ್ಷ್ಯ ಲಭ್ಯವಾಗಿವೆ. ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು, ಹಾಸ್ಟೆಲ್‍ನ ಮಹಿಳಾ ವಾರ್ಡನ್ ಹಾಗೂ ಮಠದ ವ್ಯವಸ್ಥಾಪಕ ಪರಮಶಿವಯ್ಯ ಅವರ ವಿರುದ್ಧದ ಆರೋಪಕ್ಕೆ ತನಿಖೆಯಲ್ಲಿ ಸಾಕ್ಷ್ಯಗಳು ದೊರೆತಿವೆ. 17 ವರ್ಷದ ಬಾಲಕ ಹಾಗೂ ಗಂಗಾಧರಯ್ಯ ಎಂಬುವವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳು ಸಿಕ್ಕಿಲ್ಲ ಎಂಬುದಾಗಿ ದೋಷಾರೋಪಣ ಪಟ್ಟಿಯಲ್ಲಿ ತನಿಖಾಧಿಕಾರಿ ಉಲ್ಲೇಖಿಸಿದ್ದಾರೆ.

‘2018ರಲ್ಲಿ 7ನೇ ತರಗತಿಗೆ ಪ್ರವೇಶ ಪಡೆದಿದ್ದ 17 ವರ್ಷದ ಸಂತ್ರಸ್ತೆಯು, ಮಠದ ಆವರಣದಲ್ಲಿದ್ದ ಹಾಸ್ಟೆಲ್‍ನಲ್ಲಿ ಆಶ್ರಯ ಪಡೆದಿದ್ದಳು. ಮಠದ ಪೀಠಾಧ್ಯಕ್ಷರಾಗಿರುವ ಪ್ರಕರಣದ ಮೊದಲ ಆರೋಪಿಯು ವಿದ್ಯಾರ್ಥಿನಿಯರು ಮತ್ತು ಅವರ ಕುಟುಂಬದ ಮೇಲೆ ಅನುಕಂಪ ತೋರಿ ಗೌರವ ಹಾಗೂ ವಿಶ್ವಾಸಗಳಿಸುತ್ತಿದ್ದರು. ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ರಾತ್ರಿ ವೇಳೆ ಒಬ್ಬರೇ ಇರುವ ಸಂದರ್ಭದಲ್ಲಿ ಬೆಡ್‍ರೂಂಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಳ್ಳುತ್ತಿದ್ದರು. 2018 ಮತ್ತು 2020ರಲ್ಲಿ ಹಲವು ಬಾರಿ ಹೀಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ’ ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಹಾಗೂ `16 ವರ್ಷದ ಮತ್ತೊಬ್ಬ ಸಂತ್ರಸ್ತ ವಿದ್ಯಾರ್ಥಿನಿಯನ್ನು 2021 ಹಾಗೂ 2022ರಲ್ಲಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. 2ನೇ ಆರೋಪಿಯಾಗಿರುವ ಹಾಸ್ಟೆಲ್‍ನ ಮಹಿಳಾ ವಾರ್ಡನ್ ಹಾಗೂ 4ನೇ ಆರೋಪಿಯಾದ ಮಠದ ವ್ಯವಸ್ಥಾಪಕ ಪರಮಶಿವಯ್ಯ ಈ ಕೃತ್ಯಕ್ಕೆ ಸಹಕರಿಸಿದ್ದಾರೆ. ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ’ ಎಂಬ ಅಂಶ ದೋಷಾರೋಪಣ ಪಟ್ಟಿಯಲ್ಲಿದೆ.

ಈ ಬಗ್ಗೆ ವಿಚಾರಣೆ ವೇಳೆ ಬಾಲಕಿಯೊಬ್ಬಳು ನೀಡಿರುವ ಹೇಳಿಕೆ ಹೀಗಿದೆ….” ಕೊಠಡಿಗೆ ಯಾರು ಹೋಗಬೇಕು ಎಂಬ ಚೀಟಿಯನ್ನು ಶಿವಮೂರ್ತಿ ಮುರುಘಾ ಶರಣರು ಮಹಿಳಾ ವಾರ್ಡನ್‍ಗೆ ನೀಡುತ್ತಿದ್ದರು. ಆ ಪ್ರಕಾರವಾಗಿ ಒಬ್ಬೊಬ್ಬರು ಒಂದೊಂದು ದಿನ ತೆರಳಬೇಕಿತ್ತು. ಒಂದು ವೇಳೆ ಹೋಗದೇ ಇದ್ದರೆ ಎಲ್ಲರನ್ನೂ ಶಿಕ್ಷೆಗೆ ಗುರಿ ಮಾಡಲಾಗುತ್ತಿತ್ತು'ರಾತ್ರಿ ಟ್ಯೂಷನ್ ಅವಧಿ ಮುಗಿದ ಬಳಿಕ, ಕಸ ಗುಡಿಸುವ ನೆಪದಲ್ಲಿ ನಮ್ಮನ್ನು ಕೊಠಡಿಯಲ್ಲಿ ಉಳಿಸಿಕೊಳ್ಳುತ್ತಿದ್ದರು. ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು ನೀಡುತ್ತಿದ್ದರು. ಬಟ್ಟೆ ಬಿಚ್ಚಲು ಹೇಳಿ ತಬ್ಬಿಕೊಳ್ಳುತ್ತಿದ್ದರು.’ ಆರೋಪಿ ಮದ್ಯ ಸೇವನೆ ಮಾಡುತ್ತಿದ್ದ. ಹಾಗೂ ಬೆನ್ನು ಉಜ್ಜಿಸಿಕೊಳ್ಳುವ ನೆಪದಲ್ಲಿ ಸ್ನಾನದ ಕೊಠಡಿಗೆ ಕರೆಸಿಕೊಳ್ಳುತ್ತಿದ್ದರು ” ಎಂಬ ಸಂಗತಿಯನ್ನು ಸಂತ್ರಸ್ತ ಬಾಲಕಿ ತಿಳಿಸಿದ್ದಾಳೆ ಎಂಬುದಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!